ಡಾ.ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ತಿರಸ್ಕಾರ – ಈಶ್ವರ ಖಂಡ್ರೆ
ಬೆಳಗಾವಿ: ಡಾ.ಕಸ್ತೂರಿ ರಂಗನ್ ಸಮಿತಿಯ ವರದಿಯನ್ನಾಧರಿಸಿ, ಕೇಂದ್ರ ಸರ್ಕಾರವು ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು ಸಂವಹನಿಸಲಾಗಿರುತ್ತದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದರು.
ಪ್ರಶ್ನೋತ್ತರ ವೇಳೆ ಪರಿಷತ್ತಿನಲ್ಲಿ ಸದಸ್ಯರಾದ ಐವನ್ ಡಿ ಸೋಜಾ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 865ಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡಾ.ಕಸ್ತೂರಿ ರಂಗನ್ ಸಮಿತಿಯ ವರದಿಯ ಶಿಫಾರಸ್ಸುಗಳನ್ನು ನಿರಾಕರಿಸುವ ಹಾಗೂ ಈ ವರದಿಯನ್ನು ಆಧರಿಸಿ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರದ ಅರಣ್ಯ,
ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ರಾಜ್ಯ ಸಚಿವರ ಸಂಪುಟದ ನಿರ್ಣಯವನ್ನು ಅನುಸರಿಸಿ, ರಾಜ್ಯ ಸರ್ಕಾರದ ನಿಲುವನ್ನು ದಿನಾಂಕ: 30.09.2024 ರ ಪತ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
ಡಾ.ಕಸ್ತೂರಿ ರಂಗನ್ ವರದಿಯು ಈವರೆಗೂ ಜಾರಿಯಾಗದೇ ಇರುವುದರಿಂದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಜನರು ತಮ್ಮ ಸ್ಥಳಗಳಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಪ್ರಶ್ನೆಯು ಉದ್ಭವಿಸುವುದಿಲ್ಲ ಎಂದು ಸಚಿವರು ಇದೆ ವೇಳೆ ಸ್ಪಷ್ಟಪಡಿಸಿದರು.






