ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ
ನವದೆಹಲಿ: ಡಿಸೆಂಬರ್ 26ರಿಂದ ಭಾರತೀಯ ರೈಲ್ವೆ ತನ್ನ ಟಿಕೆಟ್ ದರಗಳಲ್ಲಿ ಪರಿಷ್ಕರಣೆ ಜಾರಿಗೆ ತರಲಿದೆ. ಹೊಸ ವ್ಯವಸ್ಥೆಯಡಿ ಎಸಿ ಅಲ್ಲದ ಕೋಚ್‌ಗಳಲ್ಲಿ (ಸಾಮಾನ್ಯ, ಸ್ಲೀಪರ್ ಸೇರಿದಂತೆ) 500 ಕಿಲೋಮೀಟರ್ ವರೆಗಿನ ಪ್ರಯಾಣಕ್ಕೆ ಪ್ರಯಾಣಿಕರು ಹೆಚ್ಚುವರಿಯಾಗಿ 10 ರೂಪಾಯಿ ಪಾವತಿಸಬೇಕಾಗುತ್ತದೆ.
ಆದರೆ ಈ ದರ ಪರಿಷ್ಕರಣೆ ಉಪನಗರ (ಸ್ಥಳೀಯ) ರೈಲು ಸೇವೆಗಳು ಹಾಗೂ ಮಾಸಿಕ ಸೀಸನ್ ಟಿಕೆಟ್‌ಗಳಿಗೆ (MST) ಅನ್ವಯಿಸುವುದಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಜೊತೆಗೆ ಸಾಮಾನ್ಯ ವರ್ಗದ 215 ಕಿಲೋಮೀಟರ್ ವರೆಗಿನ ಪ್ರಯಾಣಕ್ಕೂ ಯಾವುದೇ ದರ ಏರಿಕೆ ಇರುವುದಿಲ್ಲ.
ದರ ಏರಿಕೆಯ ಭಾಗವಾಗಿ, ಪ್ರಯಾಣದ ದೂರವನ್ನು ಆಧರಿಸಿ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದ್ದು, ಎಸಿ ಅಲ್ಲದ ವರ್ಗಗಳಲ್ಲಿನ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಳ ಮಾಡಲಾಗಿದೆ.
ಈ ಪರಿಷ್ಕೃತ ದರದಿಂದ ಪ್ರಸಕ್ತ ವರ್ಷದಲ್ಲಿ ಭಾರತೀಯ ರೈಲ್ವೆಗೆ ಸುಮಾರು 600 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ, ದೇಶದ ದೂರದ ಪ್ರದೇಶಗಳನ್ನು ಸೇರಿಸಿ ಭಾರತೀಯ ರೈಲ್ವೆ ತನ್ನ ಜಾಲ ಮತ್ತು ಸೇವೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಈ ವಿಸ್ತರಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಮಾನವಶಕ್ತಿ ಅಗತ್ಯವಾಗಿದ್ದು, ಅದರ ಭಾಗವಾಗಿ ದರ ಪರಿಷ್ಕರಣೆ ಕೈಗೊಳ್ಳಲಾಗಿದೆ ಎಂದು ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ
Date:






