ಡೆಲಿವರಿ-ಆಟೋ ಕೆಲಸದ ಹೆಸರಿನಲ್ಲಿ ಗಾಂಜಾ ಪೆಡ್ಲಿಂಗ್: ಇಬ್ಬರು ಆರೋಪಿಗಳು ಅರೆಸ್ಟ್
ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಾಚರಣೆಯಲ್ಲಿ ಡೆಲಿವರಿ ಬಾಯ್ ಮತ್ತು ಆಟೋ ಚಾಲಕರ ನೆಪನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ರಾಹುಲ್ ಮತ್ತು ಪ್ರೇಮ್ ಎಂದು ಗುರುತಿಸಲಾಗಿದ್ದು, ಇವರಿಂದ ಸುಮಾರು 7 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು ₹3 ಲಕ್ಷ ಎಂದು ಅಂದಾಜಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ತಮಿಳುನಾಡಿನಿಂದ ಗಾಂಜಾ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ರಾಹುಲ್ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಪ್ರೇಮ್ ಆಟೋ ಚಾಲಕರಾಗಿದ್ದರು.
ಇವರಿಬ್ಬರೂ ತಮ್ಮ ಉದ್ಯೋಗವನ್ನು ನೆಪವಾಗಿ ಬಳಸಿಕೊಂಡು ಗಾಂಜಾ ಪೆಡ್ಲಿಂಗ್ ನಡೆಸುತ್ತಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
