ಕೊರೊನಾ ಸಂಕಷ್ಟ ಸಮಯದಲ್ಲಿ ವೈದ್ಯರು, ಮತ್ತು ಪೊಲೀಸರು ಹಗಲಿರುಳು ಎನ್ನದೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಆಶಾ ಕಾರ್ಯಕರ್ತೆಯರು ಸಹ ತಮ್ಮ ಕುಟುಂಬ, ತಮ್ಮವರಿಂದ ದೂರ ಉಳಿದು ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಜೊತೆಗೆ ತೀರಾ ಅವಶ್ಯಕ ಸಮಯದಲ್ಲಿ ಸಮಯೋಚಿತ ಕೆಲಸಗಳ ಮಾಡುತ್ತಾ, ಹಲವರ ಜೀವ ಉಳಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಪೊಲೀಸರು, ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರನ್ನು ಸರ್ಕಾರ ಕೊರೊನಾ ವಾರಿಯರ್ಸ್ ಎಂದು ಗೌರವಿಸಿದೆ. ಅದರಂತೆ ಇವರೆಲ್ಲರೂ ಸಹ ಎಂತಹ ಸವಾಲುಗಳಿದ್ದರೂ ಸಹ ಎದುರಿಸಿ ಸಾಮಾನ್ಯರ
ಪ್ರಾಣ ಉಳಿಸಿ, ನಾವು ನಿಜಕ್ಕೂ ಕೊರೊನಾ ವಾರಿಯರ್ಸ್ ಎಂಬುದನ್ನು ಸಾಬೀತುಪಡಿಸುತ್ತಾ ಬಂದಿದ್ದಾರೆ.
ಉಡುಪಿಯಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಮುಂಜಾವಿನಲ್ಲಿ ಸ್ವತಃ ತಾವೇ ಆಟೋ ಚಲಾಯಿಸಿ ಗರ್ಭಿಣಿಯ ಪ್ರಾಣ ಉಳಿಸಿದ್ದಾರೆ. ಇವರ ದಿಟ್ಟ ಕಾರ್ಯವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶ್ಲಾಘಿಸಿದ್ದಾರೆ.
ಉಡುಪಿಯ ಪೆರ್ಣಂಕಿಲದಲ್ಲಿ ರಾಜೀವಿ ಎಂಬುವರು ಆಶಾಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯರಾತ್ರಿ ೩.೧೫ರ ಸುಮಾರಿಗೆ ಪೆರ್ಣಂಕಿಲದ ಶ್ರೀಲತಾ ಎಂಬುವರು ರಾಜೀವಿ ಅವರಿಗೆ ಕರೆ ಮಾಡಿ, ಹೆರಿಗೆ ನೋವು ಹೆಚ್ಚಾಗಿರುವ ವಿಷಯ ತಿಳಿಸಿದ್ದಾರೆ. ತಕ್ಷಣವೇ ರಾಜೀವಿ ಅವರು ತಮ್ಮ ಆಟೋ ರಿಕ್ಷಾದಲ್ಲೇ ಶ್ರೀಲತ ಅವರ ಮನೆಗೆ ತೆರಳಿ, ಅದೇ ಆಟೋದಲ್ಲೇ ಶ್ರೀಲತ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೆರ್ಣಂಕಿಲದಿಂದ 20 ಕಿ.ಮೀ ದೂರದಲ್ಲಿರುವ ಉಡುಪಿಯ ಸರ್ಕಾರಿ ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆವರೆಗೂ ತಾವೇ ಆಟೋ ಚಲಾಯಿಸಿದ್ದಾರೆ. ಸದ್ಯ ಶ್ರೀಲತ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಜೀವಿ, ನನ್ನ ಗಂಡನಿಂದ ಹವ್ಯಾಸಕ್ಕಾಗಿ ಆಟೋ ಚಲಾಯಿಸುವುದನ್ನು ಕಲಿತಿದ್ದೆ. ಆದರೆ, ಇದೇ ನನಗೆ ಈಗ ವೃತ್ತಿಯಾಗಿದೆ. ಈಗಾಗಲೇ ಹಲವು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಹೆರಿಗೆಗೆ ಆಟೋ ಬಾಡಿಗೆ ಪಡೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಇನ್ನೂ ಪೆರ್ಣಂಕಿಲ ಪ್ರದೇಶದಲ್ಲಿ ಕಡಿಮೆ ಬಸ್ ಸೇವೆ ಇರುವ ಕಾರಣ ಪೆರ್ಣಂಕಿಲ ಪ್ರದೇಶದ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸುವಂತೆ ರಾಜೀವಿ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಬೆಳಗ್ಗಿನಿಂದ ಮಧ್ಯಾಹ್ನ ತನಕ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿದರೆ, ರಾತ್ರಿಯವರೆಗೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಒಟ್ಟಾರೆ ರಾಜೀವಿ ನಸುಕಿನ ವೇಳೆ ಅವರು ಯಾರಿಗೂ ಕಾಯದೇ ತಾವೇ ಖುದ್ದಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಸೂಕ್ತ ಸಮಯದಲ್ಲಿ ಶ್ರೀಲತ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ, ಯಾವುದೇ ತೊಂದರೆ ಇಲ್ಲದೇ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.ಆಶಾ ಕಾರ್ಯಕರ್ತೆ ರಾಜೀವಿ ಅವರ ಈ ಕಾರ್ಯಕ್ಕೆ ಹಲವರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಸಹ ಟ್ವೀಟ್ ಮಾಡಿದ್ದು, ಮುಂಜಾನೆ 3 ಗಂಟೆಯ ವೇಳೆ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಆಶಾಕಾರ್ಯಕರ್ತೆ ರಾಜೀವಿ ಅವರ ಕಾರ್ಯ ಪ್ರಶಂಸನೀಯ ಎಂದಿದ್ದಾರೆ.