ದಿನ ನಿತ್ಯ 6ಸಾವಿರ ಗಿಳಿಗಳಿಗೆ ಆಹಾರ ನೀಡುವ ಪಕ್ಷಿಪ್ರೇಮಿ ..!
ಜೋಸೆಫ್ . ನಮ್ಮ ನೆರೆಯ ರಾಜ್ಯ ತಮಿಳುನಾಡಿನವರು. ಇವರ ಮೂಲತಃ ತಮಿಳುನಾಡಿನವರಲ್ಲ, ಪಕ್ಕದ ಕೇರಳ ರಾಜ್ಯದಿಂದ ಚೆನ್ನೈಗೆ ಬಹಳ ವರ್ಷಗಳ ಹಿಂದೆಯೇ ಬಂದು ನೆಲೆಸಿದ್ದಾರೆ. ಇವರನ್ನು ಪರಿಸರವಾದಿ, ಪಕ್ಷಿಗಳ ರಾಜ, ಗಿಳಿರಾಮ, ಎಂದೆಲ್ಲಾ ತಮಿಳುನಾಡಿನಲ್ಲಿ ಕರೆಯುತ್ತಾರೆ.
ಸರಿಸುಮಾರು 69 ವರ್ಷದ, ಹಿರಿಯರಾದ ಜೋಸೆಫ್ ಅವರಿಗೆ ಪಕ್ಷಿಗಳೆಂದರೆ ಪಂಚಪ್ರಾಣ. ಅದರಲ್ಲೂ ತಮ್ಮ ಮನೆಯ ಮೇಲ್ಫಾವಣೆಗೆ ಪ್ರತಿನಿತ್ಯ ಸಾವಿರಾರು ಪಕ್ಷಿಗಳ ಕಂಡರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ; ಜೋಸೆಫ್ ಸರಳಜೀವಿ, ಮತ್ತೆ ಪರೋಪಕಾರಿ ಕೂಡ. ಸ್ಥಿತಿವಂತರಾಗದಿದ್ದರೂ ಬಂದವರಿಗೆ ಮೂರು ಹೊತ್ತಿನ ಊಟ ಬಡಿಸುವುದಕ್ಕೆ ಭಂಗವಿಲ್ಲ. ಚೆನ್ನೈನಲ್ಲಿ ಇವರದು ಸ್ವಂತ ಮನೆ ಇದೆ.
ಈ ಗಿಣಿಗಳ ಹಿಂಡು ಕುಳಿತಿದಿಯಲ್ಲಾ ಅದೇ ಜೋಸೆಫ್ ಅವರ ಮನೆ. ಈ ಮನೆಯ ಮೇಲ್ಫಾವಣೆಗೆ ಪ್ರತಿನಿತ್ಯ ಆರು ಸಾವಿರಕ್ಕೂ ಹೆಚ್ಚು ಗಿಳಿ ಹಿಂಡು ಬರುತ್ತದೆ. ಇಲ್ಲಿಗೆ ಪ್ರತಿನಿತ್ಯ ಬರುವ ವಿಶೇಷ ಅತಿಥಿ ಗಿಳಿಗಳಿಗೆ ನೀರು, ಆಹಾರ ಹಾಕುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯ ತನಕ ಇಲ್ಲಿದ್ದು ಗಿಳಿಗಳು ನೀರು, ಕಾಳುಗಳನ್ನು ಸೇವಿಸಿ, ತಮ್ಮ ಗೂಡಿಗೆ ಸೇರುತ್ತವೆ. ಇದು ಕೇವಲ ಒಂದು ದಿನದ ಕಥೆಯಲ್ಲ, ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಜೋಸೆಫ್ ಅವರು ಗಿಳಿಗಳನ್ನು ಹೀಗೆ ಸಲುವುದಕ್ಕೆ ಒಂದು ಕಾರಣವಿದೆ. ನಿಮಗೆ ಗೊತ್ತಿರುವಂತೆ 2004ರಲ್ಲಿ ತಮಿಳುನಾಡಿನಲ್ಲಿ ಆದ ಒಂದು ದೊಡ್ಡ ದುರಂತ ಸುನಾಮಿ. ಇದು ಸುಮಾರು 23 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ಅಲ್ಲದೆ, ಲಕ್ಷಾಂತರ ಕುಟುಂಬಗಳನ್ನು ಬೀದಿ ಪಾಲು ಮಾಡಿತು. ಇನ್ನು ಪ್ರಾಣಿ ಪಕ್ಷಿಗಳ ಸಂಕುಲವೇ ನಶಿಸುವಂತೆ ಮಾಡಿದ್ದು ತಿಳಿದಿದೆ. ಆ ಮುಹಾರುದ್ರನರ್ತನ, ಸುನಾಮಿ ಜೋಸೆಫ್ ಮನಪರಿವರ್ತನೆಗೆ ಕಾರಣವಾಯಿತು.
ಆ ಸುನಾಮಿಯಿಂದ ಸಮುದ್ರ ತಡದಲ್ಲಿ ನೀರು, ಆಹಾರ ಸೇವಿಸಿಕೊಂಡು ಹಾರಾಡುತ್ತಿದ್ದ ಪ್ರಾಣಿ-ಪಕ್ಷಿಗಳ ಹಿಂಡಿಗೆ ಸಂಚುಕಾರವಾಯಿತು. ಪರಿಣಾಮವಾಗಿ ಸಮುದ್ರ ತಟದಿಂದ ಮನೆಗಳತ್ತ ನೀರು, ಕಾಳನ್ನು ಆರಿಸಿಕೊಂಡು ಗಿಳಿಗಳ ಹಿಂಡು ಬರಲಾರಂಭಿಸಿದ್ದವು. ಪ್ರತಿನಿತ್ಯ ಸಾವಿರಾರು ಗಿಳಿಗಳು ಜೋಸೆಫ್ ಅವರ ಮನೆಯ ಮೇಲ್ಫಾವಣೆಗೆ ಬಂದು ಕೂರುಲು ಆರಂಭಿಸಿದವು. ಆಗ, ಮೊದಲೇ ಪಕ್ಷಿ ಪ್ರೇಮಿಯಾಗಿದ್ದ ಜೋಸೆಫ್ ಅವರು ಆ ಗಿಳಿಗಳ ಹಿಂಡುಗೆ ಆಶ್ರಯ ಕೊಟ್ಟರು ಎನ್ನಬಹುದು.
ಹೀಗೆ ಕಳೆದ 5 ವರ್ಷಗಳಿಂದಲೂ ಇಲ್ಲಿಗೆ ಪ್ರತಿನಿತ್ಯ ಬರುವ 6 ಸಾವಿರಕ್ಕೂ ಹೆಚ್ಚು ಗಿಳಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಿದ್ದಾರೆ. ಮನೆಗಳ ಬಾಡಿಗೆ ಲೆಕ್ಕ ಹಾಕದೆ, ಗಲೀಜು, ಗಲಾಟೆ ಎಂದು ಗೊಣಗದೆ, ಗಿಳಿಗಳಿಗಾಗಿಯೇ ಮರದಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಟೈಮ್ ನಲ್ಲೂ 75 ಕೆಜಿಯಷ್ಟು ಅಕ್ಕಿಯನ್ನು ಹಾಕುತ್ತಾರೆ. ಎಚ್ಚರಿಕೆಯಿಂದಅಕ್ಕಿಯ ಸಣ್ಣ ಸಣ್ಣ ರಾಶಿ, ನೀರಿನ ವ್ಯವಸ್ಥೆ ಮಾಡುತ್ತಾರೆ. ಇಲ್ಲಿ ಗಿಳಿಗಳ ಚಿಲಿಪಿಲಿ ನಾದವನ್ನು ಕೇಳುವುದೇ ಒಂದು ಖುಷಿ.
ಕಳೆದ 15 ವರ್ಷಗಳಿಂದ ನಿರಂತರವಾಗಿ ಗಿಳಿಗಳ ಹಿಂಡಿಗೆ ತಮ್ಮ ಮನೆಯ ಮೇಲ್ಫಾವಣೆಯಲ್ಲಿ ವ್ಯವಸ್ಥೆ ಮಾಡಿ ಆಹಾರ, ನೀರು ನೀಡುತ್ತಾ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ. ಇವರ ಪಕ್ಷಿ ಸೇವೆ ಪ್ರತಿಯೊಬ್ಬರಿಗೂ ಮಾದರಿ.