ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೃಣ ಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿದ ಮಮತಾ ಬ್ಯಾನರ್ಜಿಯವರಿಗೆ ಅಭಿನಂದನೆಗಳು. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಸಾಧ್ಯವಾಗುವ ಎಲ್ಲ ಬೆಂಬಲ ನೀಡುತ್ತದೆ. ಬಿಜೆಪಿ ಪಕ್ಷಕ್ಕೆ ಆಶೀರ್ವಾದ ಮಾಡಿದ ಪಶ್ಚಿಮ ಬಂಗಾಳದ ಜನತೆಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಒಟ್ಟು 292 ಕ್ಷೇತ್ರಗಳಲ್ಲಿ ಟಎಂಸಿ 215ರಲ್ಲಿ ಗೆಲುವು ಪಡೆದುಕೊಂಡಿದೆ. ಬಿಜೆಪಿ 76ರಲ್ಲಿ ಗೆಲುವು ದಾಖಲಿಸಿದೆ. ಇತ್ತ ಶಿಷ್ಯ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ಕಣಕ್ಕಿಳಿದಿದ್ದ ಮಮತಾ ಬ್ಯಾನರ್ಜಿ ಸೋತಿದ್ದಾರೆ. ಒಮ್ಮೆ ಸುವೆಂದು ಮುನ್ನಡೆಗೆ ಬಂದ್ರೆ ಮರುಕ್ಷಣವೇ ಮಮತಾ ಲೀಡ್‍ಗೆ ತೆಗೆದುಕೊಳ್ಳುತ್ತಿದ್ದರು. ಕೊನೆವರೆಗೂ ವಿಜಯಮಾಲೆ ತೂಗೂಯ್ಯಾಲೆಯಲ್ಲೇ ಇತ್ತು. ಅಷ್ಟರ ಮಟ್ಟಿಗೆ ಸುವೆಂದು ಅಧಿಕಾರಿ ಬಿಗ್ ಫೈಟ್ ನೀಡಿದರು. ಕೊನೆಗೆ ಚುನಾವಣಾಧಿಕಾರಿಗಳು ಮಮತಾ 1,200 ಮತಗಳಿಂದ ಗೆದ್ದರು ಎಂದು ಘೋಷಿಸಿದ್ರು. ಆದ್ರೆ ಇದಾದ ಸ್ವಲ್ಪ ಹೊತ್ತಿಗೆ ಸುವೆಂದು 1,622 ಮತಗಳಿಂದ ಗೆದ್ದರು ಎಂದು ಘೋಷಿಸಲಾಯ್ತು.
ಸದ್ಯ ನಂದಿಗ್ರಾಮ ಫಲಿತಾಂಶದ ಬಗ್ಗೆ ಗೊಂದಲ ಏರ್ಪಟ್ಟಿದೆ. ಮತ್ತೆ ಮರು ಎಣಿಕೆ ನಡೆಯುತ್ತಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮಮತಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.