ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಸರಿತಾ ರೇ. ಬಿಹಾರದ ಹಾಜಿಪುರ್ನವರು. ನೂರಾರು ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾದವರು. ಮುಗ್ಧ ಮನಸ್ಸಿನ ಮಕ್ಕಳ ಜೊತೆ, ಮೈ ಮೇಲಿನ ಕೊಳೆಯನ್ನು ಮನಸ್ಸಿಗೂ ತಾಗಿಸಿಕೊಳ್ಳದೇ, ಅಮಾಯಕ ಮಕ್ಕಳಲ್ಲಿ ದೇವರನ್ನು ಕಾಣುತ್ತಿದ್ದಾರೆ. ನೂರಾರು ಬಡ ಮಕ್ಕಳಿಗೆ ಶಿಕ್ಷಣದ ಮೂಲಕ ಬದುಕಿನ ದಾರಿ ತೋರಿಸುತ್ತಿದ್ದಾರೆ.
30ರ ಹರೆಯದ ಸರಿತಾ ರೇ ಅವರ ತಂದೆ ಭಾರತೀಯ ಅರಣ್ಯ ಸೇವೆ – ಐಎಫ್ ಎಸ್ ಅಧಿಕಾರಿ. ಇವರ ಸೇವೆ ಬಿಹಾರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಸೇವೆ ಸಲ್ಲಿಸಿದ್ದು. ಹಾಗಾಗಿ ಈಶಾನ್ಯ ರಾಜ್ಯಗಳಲ್ಲೇ ಸರಿತಾ ಅವರು ಬೆಳೆದಿದ್ದು. ನೋಡಿ, ಅಲ್ಲಿ ಬೆಳೆದಿದ್ದಾರೂ, ಅವರ ಬದುಕಿನ ಬೇರು ಬಿಟ್ಟುಕೊಂಡಿದ್ದು ಬಿಹಾರದಲ್ಲಿ. ಚಿಕ್ಕವರಿದ್ದಾಗಿನಿಂದಲೂ ಅವರಿಗೆ ಬಡವರು, ಶೋಷಿತರೆಂದರೆ ಎಲ್ಲಿಲ್ಲದ ಪ್ರೀತಿ, ವಾತ್ಸಲ್ಯ.
ಬಡವರ ಮೇಲಿನ ಪ್ರೀತಿ, ಸರಿತಾ ದೊಡ್ಡವರಾದ ಮೇಲೂ ಬಂತು. ಈ ನಡುವೆಯೇ ಸರಿತಾ ಅವರು ಉನ್ನತ ವ್ಯಾಸಂಗ ಮಾಡಿ, ಬಿಹಾರದ ಜುವೆನಿಲ್ ಜಸ್ಟಿಸ್ ಡಿಪಾಟ್ರ್ಮೆಂಟ್-ಜೆಜೆಡಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಅಲ್ಲಿ ಆರಂಭದಲ್ಲಿ ಎದುರಾದ ಅನೇಕ ಸವಾಲುಗಳನ್ನು ಮೆಟ್ಟಿನಿಂತು, ಜನಪರ ಚಿಂತನೆಗಳ ಬಗ್ಗೆ ಗಮನ ಹರಿಸಿದರು. ಕೊನೆಗೆ ಕೈ ತುಂಬಾ ಸಂಬಳದ ಕೆಲಸವನ್ನು ಕೈ ಬಿಟ್ಟು, ಬಡ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುವ ಪಣತೊಟ್ಟರು.
ವಿಶೇಷವಾಗಿ ದುಡಿಯುವ ಮಕ್ಕಳು ಎಂದರೆ ಸರಿತಾ ರೇ ಅವರಿಗೆ ಜೀವ. ಆಟ ಪಾಠ ಕಲಿಯಬೇಕಾದ ವಯಸ್ಸಿನಲ್ಲಿ ಮಕ್ಕಳ ಮನಸ್ಸು ವಿಚಲಿತಗೊಂಡು ಅಪರಾಧ ಕೃತ್ಯಗಳತ್ತ ಸೆಳೆಯುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ದುಡಿಯಲು ಹಚ್ಚಬಾರದು ಎನ್ನುವುದು ರೇ ಅವರ ವಾದ. ಅದಕ್ಕಾಗಿ ಬಾಲ ಕಾರ್ಮಿಕ ಪದ್ದತಿ ವಿರುದ್ದ ಗಟ್ಟಿ ಧ್ವನಿ ಎತ್ತಿ, ಸಮಾಜದ ಬದಲಾವಣೆಗೆ ಧ್ವನಿಯಾದರು. ಅಷ್ಟೇ ಅಲ್ಲ, ಕಡ್ಡಾಯ ಶಿಕ್ಷಣಕ್ಕೆ ಪ್ರತಿಧ್ವನಿಯಾದರು.
ಸರಿತಾ ರೇ, ಚಿಂದಿ ಅಯುವವರು, ಕೂಲಿಕಾರರ ಮಕ್ಕಳು, ಕಾರ್ಖಾನೆ, ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ, ದುಡಿಯುವ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದರು. ಅದಕ್ಕಾಗಿ ಕೊಳಚೆ ಪ್ರದೇಶಗಳು, ಹಳ್ಳಿಗಳು, ಬಡವರಿವರು ಸ್ಥಳಗಳಿಗೆ ಹೋಗಿ, ಮಕ್ಕಳಿಗೆ ಶಿಕ್ಷಣ ನೀಡುವಂತೆ ಅವರ ತಂದೆ ತಾಯಿಯಂದಿರರಿಗೆ ಪ್ರೇರೇಪಿಸಿದರು. ಅದು ನಿಧಾನವಾಗಿ ಬದಲಾವಣೆ ಗಾಳಿ ಬೀಸಲು ಆರಂಭಿಸಿತು. ಹೀಗಾಗಿ ಅವರು, ಮಕ್ಕಳಿಗಾಗಿಯೇ ಏಕೆ? ಸಂಸ್ಥೆಯೊಂದನ್ನು ಸ್ಥಾಪಿಸಬಾರದೆಂದು ನಿರ್ಧರಿಸಿದರು.
ಶೋಷಿತರ ಮಕ್ಕಳಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಬದಲಾವಣೆ ತರಲು 2009ರಲ್ಲಿ ಟಾಪರ್ ಸ್ಟಡಿ ಪಾಯಿಂಟ್- ಉಡಾನನ್ನು ಅಸ್ತಿತ್ವಕ್ಕೆ ತಂದರು. ಇಲ್ಲಿ ಬಡ ಮಕ್ಕಳಿಗೆ ಯಾವುದೇ ಶುಲ್ಕ ಇಲ್ಲದೆ, ಉಚಿತವಾಗಿ ಶಿಕ್ಷಣ ದೊರಕಿಸುವ ವ್ಯವಸ್ಥೆ ಮಾಡಿದರು. ಕೊಳಚೆ ಪ್ರದೇಶಗಳ ನಿವಾಸಿಗರು, ಹೆಚ್ಚಾಗಿ ಬಡವರಿರುವ ಪ್ರದೇಶಗಳಿಗೆ ಹೋಗಿ, ಪೋಷಕರನ್ನು ಮನವೊಲಿಸಿ ಮಕ್ಕಳನ್ನು ಕರೆತರುತ್ತಿದ್ದರು. ಉಡಾನ್ ನಲ್ಲಿ ಮಕ್ಕಳಿಗೆ ಇಷ್ಟವಾದ ಶಿಕ್ಷಣ ಕಲಿಸುತ್ತಿದ್ದರು. ಅಗತ್ಯವಿದರೆ, ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳಿಗೆ ಅಗತ್ಯ ದೊರಕಿಸುತ್ತಿದ್ದರು.
ಸರ್ಕಾರಿ ಶಾಲಾ ವ್ಯವಸ್ಥೆ ಬದಲಾಗಬೇಕು; ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಮತ್ತೆ ಶಿಕ್ಷಣ ತಾರತಮ್ಮ ನಿಲ್ಲಬೇಕು ಎನ್ನುವುದು ಸರಿತಾ ರೇ ಅವರ ವಾದ. ಅದನ್ನು ಸ್ವತಃ ಮಾಡಿ ತೋರಿಸಿದ ಅವರ ಹಾದಿ ಪ್ರತಿಯೊಬ್ಬರಿಗೆ ಆದರ್ಶ.