ಭಾರಿ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಒಂದೊಂದಾಗಿ ಬರುತ್ತಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಸರ್ಕಾರ ರಚಿಸುವುದು ಖಚಿತವಾಗಿದೆ.
ಕರ್ನಾಟಕದಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತೀವ್ರ ಮುಖಭಂಗವಾಗಿದೆ. ಜೆಡಿಎಸ್ ಕೇವಲ 1 ಕ್ಷೇತ್ರದಲ್ಲಿ ಗೆದ್ದಿದೆ. ಹಾಸನದಲ್ಲಿ ಜೆಡಿಎಸ್ ಗೆದ್ದಿದ್ದರೆ, ತುಮಕೂರು, ಮಂಡ್ಯ, ಶಿವಮೊಗ್ಗ, ವಿಜಯಪುರ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸೋಲುಂಡಿದೆ. ಜೆಡಿಎಸ್ ಸೋಲುಂಡಿದೆ ಎಂಬುದನ್ನು ಒತ್ತಿ ಹೇಳಲು ಕಾರಣ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಅವರ ಮೊಮ್ಮಗಗೆ ಆಗಿರುವ ಹೀನಾಯ ಸೋಲು.
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಸ್ವ-ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅಲ್ಲಿ ಸಂಸದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಕೈ ಕೊಟ್ಟಿದ್ದು ಆಕ್ರೋಶಕ್ಕೆ ಕಾರಣವೂ ಆಗಿತ್ತು. ಮುದ್ದಹನುಮೇಗೌಡರು ಮತ್ತು ಮಾಜಿ ಎಂಎಲ್ಎ ಕೆ.ಎನ್ ರಾಜಣ್ಣ ದೇವೇಗೌಡರ ವಿರುದ್ಧ ತೊಡೆ ತಟ್ಟಲು ನಿರ್ಧರಿಸಿದ್ದರು. ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ, ಮೈತ್ರಿ ನಾಯಕರು ಅವರು ನಾಮಪತ್ರ ವಾಪಸ್ ಪಡೆಯುವಂತೆ ನೋಡಿಕೊಂಡಿದ್ದರು.
ಅಂತಿಮವಾಗಿ ದೇವೇಗೌಡರನ್ನು ತುಮಕೂರು ಮತದಾರರು ಸೋಲಿಸಿದ್ದಾರೆ. ಬಿಜೆಪಿಯ ಜಿ.ಎಸ್ ಬಸವರಾಜ್ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧವೇ ಗೆದ್ದು ಬೀಗಿದ್ದಾರೆ. ಬಸವರಾಜು ಅವರಿಗೆ ತವರಿನ ಜನ ಮತ ಭಿಕ್ಷೆ ನೀಡಿದ್ದಾರೆ. ವಲಸೆ ಬಂದ ದೇವೇಗೌಡರನ್ನು ವಾಪಸ್ಸು ಕಳುಹಿಸಿಕೊಟ್ಟಿದ್ದಾರೆ.
ದೇವೇಗೌಡರಿಗೆ ಮಾತ್ರವಲ್ಲದೆ ಅವರ ಮೊಮ್ಮಗ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಯೂ ಸೋಲುಂಡಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ನಿಖಿಲ್ಗೆ ಹೀನಾಮಾನ ಸೋಲಾಗಿದೆ. ಇದು ಸಿಎಂ ಕುಮಾರಸ್ವಾಮಿ ಅವರಿಗೆ ಮುಖಭಂಗವನ್ನು ತಂದಿದೆ.
ದೇವೇಗೌಡರ ಒಬ್ಬ ಮೊಮ್ಮಗ, ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಮಾತ್ರ ಜೆಡಿಎಸ್ನಿಂದ ಸಂಸತ್ ಪ್ರವೇಶ ಮಾಡುತ್ತಿದ್ದಾರೆ.
ದೇವೇಗೌಡ್ರಿಗೆ ಮಾತ್ರವಲ್ಲ ಅವರ ಮೊಮ್ಮಗಗೂ ಸೋಲಿನ ಆಘಾತ..!
Date: