ದೇಶದಲ್ಲೇ ಅತೀ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಗಳು ಇರೋದು ಕರ್ನಾಟಕದಲ್ಲಿ: ವರದಿಯಲ್ಲಿ ಬಹಿರಂಗ
ಬೆಂಗಳೂರು:- ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಿರುವ ಕರ್ನಾಟಕ, ರಾಷ್ಟ್ರದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟ್ರಾಫಿಕ್‌ನಲ್ಲಿ ಸದ್ದಿಲ್ಲದೆ ಸುಯ್ಯನೆ ಪಕ್ಕದಲ್ಲೇ ನುಸುಳಿ ಹೋಗುವ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಕಾರುಗಳ ಭರಾಟೆ ನಗರ ಪ್ರದೇಶಗಳಲ್ಲಿ ಹೆಚ್ಚಿವೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿ ನೂರಾರು ಕಿಲೋ ಮೀಟರ್ ಸಾಗುವ ಹೊಸ ಗಾಡಿಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಅದರ ಜೊತೆಗೆ ಬ್ಯಾಟರಿ ಚಾರ್ಜ್ ಮಾಡುವ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆಯೂ ಏರಿಕೆಯಾಗಿದ್ದು, ಅಂಥ ಅತಿ ಹೆಚ್ಚು ಸ್ಟೇಷನ್‌ಗಳನ್ನು ಹೊಂದಿರುವ ಹೆಗ್ಗಳಿಗೆ ನಮ್ಮ ಕರ್ನಾಟಕ ಪಾತ್ರವಾಗಿದೆ.
ಕೇಂದ್ರ ಇಂಧನ ಸಚಿವಾಲಯದ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರಾಜ್ಯದಲ್ಲಿ ಒಟ್ಟು 5,765 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಸುಸ್ಥಿರ ಮತ್ತು ಶುದ್ಧ ಇಂಧನ ಬಳಕೆ ವಿಚಾರದಲ್ಲಿ ರಾಜ್ಯ ಸರಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ.
ಶುದ್ಧ ಇಂಧನದ ಬಗ್ಗೆ ಕರ್ನಾಟಕಕ್ಕೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಇದು ತೋರಿಸಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಸಾಧನೆಯು ಸುಸ್ಥಿರತೆ ಮತ್ತು ಶುದ್ಧ ಇಂಧನಕ್ಕೆ ರಾಜ್ಯದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯ ವಿಚಾರದಲ್ಲಿ ಕರ್ನಾಟಕವು ಗಮನಾರ್ಹ ಬೆಳವಣಿಗೆ ಸಾಧಿಸಿದ್ದಲ್ಲದೆ, ಮುಂಚೂಣಿಯಲ್ಲಿದೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಇದು ರಾಜ್ಯದ ಒಟ್ಟು ಶೇ 85 ಕ್ಕಿಂತ ಹೆಚ್ಚಾಗಿದೆ ಎಂದು ಇಂಧನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕರ್ನಾಟಕವು 2017 ರಲ್ಲಿ ಎಲೆಕ್ಟ್ರಿಕ್ ವೆಹಿಕಲ್ ನೀತಿಯನ್ನು ಪರಿಚಯಿಸಿತ್ತು. ಅಲ್ಲದೆ, ಎಲೆಕ್ಟ್ರಿಕ್ ವೆಹಿಕಲ್ ನೀತಿಯನ್ನು ಅಳವಡಿಸಿದ ಮೊದಲ ರಾಜ್ಯವಾಗಿ ಗುರುತಿಸಿಕೊಂಡಿತ್ತು. ಈ ಉಪಕ್ರಮವನ್ನು 2021 ರಲ್ಲಿ ಮತ್ತಷ್ಟು ಬಲಪಡಿಸಲಾಗಿತ್ತು.
ಇಂಧನ ಇಲಾಖೆಯು ಕರ್ನಾಟಕದಾದ್ಯಂತ ಮಾದರಿ ಎಲೆಕ್ಟ್ರಿಕ್ ವೆಹಿಕಲ್ ನಗರಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ವೆಹಿಕಲ್ ಅಳವಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಮತ್ತು ಭವಿಷ್ಯಕ್ಕಾಗಿ ಸುಸ್ಥಿರ ಸಾರಿಗೆ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.