ಧರ್ಮಸ್ಥಳ ಕೇಸ್: FSL ಫಲಿತಾಂಶ ಬರೋ ತನಕ ಶೋಧ ಕಾರ್ಯ ಸ್ಥಗಿತ: ಪರಮೇಶ್ವರ್
ಬೆಂಗಳೂರು: ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿಯೊಬ್ಬ ಹೇಳಿದ್ದರಿಂದಲೇ ಈ ಪ್ರಕರಣ ದೇಶವ್ಯಾಪಿ ಗಮನ ಸೆಳೆದಿದೆ. ಇದರಂತೆ ಸರ್ಕಾರ ಎಸ್ಐಟಿ ರಚಿಸಿ ತನಿಖೆ ನಡೆಸುತ್ತಿದೆ. ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸದನದಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಮಾಸ್ಕ್ ಮ್ಯಾನ್ ಹೇಳಿದಂತೆ ಎಸ್ಐಟಿ ತಂಡವು ಶೋಧ ಕಾರ್ಯ ಮುಂದುವರಿಸಿತು.
ಧರ್ಮಸ್ಥಳದ ಸುತ್ತಮುತ್ತ ಸುಮಾರು ಹತ್ತು ಸ್ಥಳಗಳಲ್ಲಿ ಅಗೆದಿದ್ದು, ಅವುಗಳಲ್ಲಿ ಕೇವಲ ಎರಡು ಜಾಗಗಳಲ್ಲಿ ಮಾತ್ರ ಅಸ್ಥಿಪಂಜರ ಹಾಗೂ ಮಾನವ ಮೂಳೆಗಳು ಪತ್ತೆಯಾಗಿವೆ. ಇನ್ನೂ ಅಧಿಕೃತ ತನಿಖೆ ಆರಂಭವಾಗಿಲ್ಲ. ಪತ್ತೆಯಾದ ಮೂಳೆಗಳ ಅನಾಲಿಸಿಸ್ ವರದಿ ಬಂದ ಬಳಿಕವೇ ಮುಂದಿನ ತನಿಖೆ ಆರಂಭವಾಗಲಿದೆ. ಅಪರಿಚಿತ ವ್ಯಕ್ತಿ ತೋರಿಸಿದ ಪ್ರತಿಯೊಂದು ಜಾಗವನ್ನೂ ಅಗೆಯುವುದಿಲ್ಲ, ಉತ್ಖನನ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಎಸ್ಐಟಿಯೇ ನಿರ್ಧರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.