ನಗರದಲ್ಲಿ ನಡೀತಾ ಹದಿಹರಯದ ಡ್ರಗ್ ಪಾರ್ಟಿ!? ಪ್ರತಿಷ್ಠಿತ ಕಾಲೇಜು ಯುವಕ-ಯುವತಿಯರ ವೀಡಿಯೋ ವೈರಲ್!
ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಣ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಮಾದಕ ವಸ್ತು ಸಾಗಾಟ ಹಾಗೂ ಮಾರಾಟ ಮತ್ತು ಸೇವನೆಯ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಹದಿಹರಯದವರ ಡ್ರಗ್ಸ್ ಪಾರ್ಟಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಡ್ರಗ್ಸ್ ಪಾರ್ಟಿಯಲ್ಲಿ ಪ್ರತಿಷ್ಠಿತ ಕಾಲೇಜು ಯುವಕ-ಯುವತಿಯರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಪೀಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾದರೂ ಎಫ್‌ಐಆರ್ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಪೀಣ್ಯಾ ಠಾಣಾ ವ್ಯಾಪ್ತಿಯ ಅಮರಾವತಿ ಬಡವಾಣೆಯ ಫ್ಲ್ಯಾಟ್‌ನಲ್ಲಿ ಪಾರ್ಟಿ ನಡೆದಿದೆ. ಯುವಕ-ಯುವತಿಯರಿಂದ ಲೇಟ್ ನೈಟ್ ಪಾರ್ಟಿ ನಡೆದಿದೆ. ಕಳೆದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ದಿನ ನಡೆದ ಪಾರ್ಟಿ ವೀಡಿಯೋ ವೈರಲ್ ಆಗಿದೆ. ಜನವರಿ ೧೨ ರಂದು ಈ ಕುರಿತು ಪೀಣ್ಯಾ ಠಾಣೆಯಲ್ಲಿ ದೂರು ದಾಖಲಾಗಿದೆ. ಮೋಜು-ಮಸ್ತಿಯ ವೀಡಿಯೊಗಳಿದ್ದು, ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.