ನಟ ದರ್ಶನ್ ಕೇಸ್: ಮಧ್ಯಂತರ ಜಾಮೀನು ತೆರವಿಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದಿಂದ ಅನುಮತಿ
ಬೆಂಗಳೂರು: ನಟ ದರ್ಶನ್ ಅವರು ಜಾಮೀನು ಪಡೆದು ವಾರಗಳು ಕಳೆಯುತ್ತಾ ಬಂದಿದೆ. ಅದಾದ ಬಳಿಕ ದರ್ಶನ್ ಅವರು ಆಸ್ಪತ್ರೆ ಸೇರಿದ್ದಾರೆ. ದರ್ಶನ್ಗೆ ಆಪರಷೇನ್ ಅಗತ್ಯ ಇದೆ ಎಂದು ವಕೀಲರು ಬಲವಾಗಿ ವಾದಿಸಿದ್ದರು. ಆದರೆ, ಈವರೆಗೆ ದರ್ಶನ್ ಆಪರೇಷನ್ ಮಾಡಿಸಿಕೊಂಡಿಲ್ಲ. ಇದು ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಪೊಲೀಸರು ಮುಂದಾಗಿದ್ದಾರೆ.
ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿರುವ ಕಡತವನ್ನು ಪೊಲೀಸರು ಗೃಹ ಇಲಾಖೆಗೆ ಕೊಟ್ಟಿದ್ದಾರೆ. ಆದೇಶ ಪ್ರತಿಯನ್ನು ಗೃಹ ಇಲಾಖೆ ಪರಿಶೀಲಿಸಿದೆ. ಇದಕ್ಕೆ ಅನುಮತಿ ಕೂಡ ನೀಡಿದೆ. ಈಗ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಸುಪ್ರೀಂ ಕೋರ್ಟ್ನಲ್ಲಿ ಪೊಲೀಸರು ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ. ಇದರಿಂದ ದರ್ಶನ್ಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿ 4 ತಿಂಗಳು ಸೆರೆವಾಸ ಅನುಭವಿಸಿದ್ದ ದರ್ಶನ್ ಅವರಿಗೆ ವೈದ್ಯಕೀಯ ಕಾರಣಗಳಿಂದ 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.