ಈ ಜಾತಿ, ಧರ್ಮವನ್ನೆಲ್ಲಾ ನಾವೇ ಮಾಡಿಕೊಂಡಿರುವುದು..ಯಾವ್ದೇ ಜಾತಿ, ಧರ್ಮಕ್ಕೆ ಸೇರಿದ ನಾವಿರಲಿ…ನಾವೆಲ್ಲಾ ಒಂದೇ…ಸರ್ವ ಧರ್ಮಿಯರು ಸಹೋದರತ್ವದಿಂದ ಜೀವನ ಸಾಗಿಸುವ ದೇಶ ನಮ್ಮದು.
ರಾಜಕಾರಣಿಗಳು ಜಾತಿ,ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಾರೆ. ವೋಟ್ ಗಾಗಿ ಅವರು ಒಡೆದು ಆಳುತ್ತಾರೆ..!! ಆದರೆ , ಎಲ್ಲಾ ರಾಜಕಾರಣಿಗಳು ಹಾಗಿಲ್ಲ. ತನ್ನ ಜಾತಿಯನ್ನು ಮಾತ್ರವಲ್ಲದೆ ಪರ ಜಾತಿಯವರನ್ನೂ ಪ್ರೀತಿಸಿ, ಕಾಳಜಿ ತೋರುವ ಜನಮೆಚ್ಚಿದ ರಾಜಕಾರಣಿಗಳಿದ್ದಾರೆ.
ಹೀಗೆ ಈ ಕಾಲದಲ್ಲೂ ಸರ್ವಧರ್ಮ ಸಹಿಷ್ಣು ವಾಗಿರುವ ರಾಜಕೀಯ ನಾಯಕರಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಸಹ ಒಬ್ಬರು. ಖಾದರ್ ಹಿಂದೂ ಧರ್ಮದ ದೇವರಿಗಾಗಿ ತಮ್ಮ ಬೆಲೆಬಾಳುವ ಜಮೀನು ಬಿಟ್ಟುಕೊಡುವ ಮೂಲಕ ಸರ್ವಧರ್ಮ ಸಮನ್ವಯತೆ ಸಾರಿ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ನಿಜ, ನಿನ್ನೆ ನಾಗರ ಪಂಚಮಿ ದಿನದಂದೇ ಯು.ಟಿ.ಖಾದರ್ ‘ಅಲ್ಲಾ’ ಮೆಚ್ಚುವ , ಜನ ಎಂದೂ ಮರೆಯದ ಕೆಲಸ ಮಾಡಿದ್ದಾರೆ. ನಾಗಾರಾಧನೆಗಾಗಿ ದಳವಾಯಿ ಮನೆತನಕ್ಕೆ ಉಚಿತವಾಗಿ ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ ಖಾದರ್..!
ಹೌದು, ಬಂಟ್ವಾಳ ತಾಲೂಕಿನ ಪರಿಯಾಲ್ತಡ್ಕದಲ್ಲಿರುವ ಯು.ಟಿ.ಖಾದರ್ ಅವರ ಜಮೀನಿನಲ್ಲಿ ದಳವಾಯಿ ಮನೆತನಕ್ಕೆ ಸೇರಿದ ಒಂದು ನಾಗಬನವಿತ್ತು. ತಮ್ಮ ಕುಲಕ್ಕೆ ಸೇರಿರುವ ಆ ನಾಗಬನ ನಿಮ್ಮಲ್ಲಿರುವ ಕಾರಣ ನಾಗರಾಧನೆಗೆ ಅಡ್ಡಿಯಾಗಬಾರದು. ಹೀಗಾಗಿ ಈ ನಾಗಬನವನ್ನು ಬಿಟ್ಟು ಕೊಡುವಂತೆ ದಳವಾಯಿ ಕುಟುಂಬ ಶಾಸಕರಲ್ಲಿ ನಿವೇದಿಸಿಕೊಂಡಿತ್ತು.
ಆ ದಳವಾಯಿ ಕುಟುಂಬ ಆ ಜಾಗವನ್ನು ಹಣ ನೀಡಿ ಕೊಂಡುಕೊಳ್ಳಲು ರೆಡಿಯಾಗಿತ್ತಾದ್ರೂ ಯು.ಟಿ ಖಾದರ್ ಅರ್ಧ ಎಕರೆ ಜಮೀನು ಉಚಿತವಾಗಿ ನೀಡಿದ್ದಾರೆ. ಅಲ್ಲದೇ ನಿಮ್ಮ ಆಚರಣೆ ಧಕ್ಕೆಯಾಗೋದು ಬೇಡ, ದುಡ್ಡು ಬೇಡ ಜಾಗವನ್ನ ಉಚಿತವಾಗಿ ನೀಡುತ್ತೇನೆ ಅಂತ ಬಹಳ ಪ್ರೀತಿಯಿಂದ ಜಮೀನು ನೀಡಿದ್ದಾರೆ. 20 ಸೆಂಟ್ಸ್ ಜಾಗವನ್ನ ಉಚಿತವಾಗಿ ದಳವಾಯಿ ಕುಟುಂಬಕ್ಕೆ ನೀಡುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಹಾಗೂ ತಾನು ಸರ್ವಧರ್ಮ ಸಹಿಷ್ಣು…ನನ್ನಲ್ಲಿ ಎಲ್ಲರೂ ಒಂದು ಎನ್ನುವ ಆದರ್ಶ ವ್ಯಕ್ತಿತ್ವವನ್ನು ಮೆರೆದಿದ್ದಾರೆ.
ಮುಸ್ಲೀಂ ಧರ್ಮಕ್ಕೆ ಸೇರಿದ ರಾಜಕೀಯ ನಾಯಕರೊಬ್ಬರು ಹಿಂದೂ ಧರ್ಮದವರ ಆಚರಣೆಗೆ ಯಾವತ್ತೂ ತೊಂದರೆ ಆಗಬಾರದು ಎಂದು ತನ್ನ ಜಮೀನನ್ನು ಉಚಿತವಾಗಿ ನೀಡಿರುವುದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.