ಮಂಡ್ಯದ ರಾಜಕಾರಣ ದಿನದಿಂದ ದಿನಕ್ಕೆ ವರ್ಣರಂಜಿತವಾಗುತ್ತಿದ್ದು ಟೀಕೆ ಟಿಪ್ಪಣಿಗಳೂ ಸಹ ತಾರಕಕ್ಕೆ ಏರುತ್ತಿದೆ. ನಿನ್ನೆಯಷ್ಟೆ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಸುಮಲತಾ ಅಂಬರೀಷ್ ಮಂಡ್ಯದ ಗೌಡ್ತಿ ಅಲ್ಲ ಅವರು ತೆಲುಗಿನ ನಾಯ್ಡು ಕುಟುಂಬದವರು ಅಂಬರೀಷ್ ರನ್ನು ಮದುವೆಯಾಗಿ ಬಂದ ಮಾತ್ರಕ್ಕೆ ಗೌಡ್ತಿ ಆಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು.
ಈ ಹೇಳಿಕೆಗೆ ಇದೀಗ ಟಾಂಗ್ ನೀಡಿರುವ ಕಾಂಗ್ರೆಸ್ ನ ಸಚಿವ ಎಂಟಿಬಿ ನಾಗರಾಜ್ ಜಾತಿ ವಿಚಾರ ಕೆದಕಿದ ವಿರುದ್ಧ ತಿರುಗಿಬಿದ್ದಿದ್ದಾರೆ.
ಸುಮಲತಾ ಮತ್ತು ಅಂಬರೀಷ್ ಮದುವೆಯಾಗಿ 28 ವರ್ಷ ಸಂಸಾರ ನಡೆಸಿದ್ದಾರೆ ಮದುವೆಯಾದ ಬಳಿಕ ಅಂಬರೀಷ್ ಜಾತಿಯೇ ಸುಮಲತಾಗೆ ಬರುತ್ತದೆ ಹೀಗಾಗಿ ಅವರು ಮಂಡ್ಯದ ಗೌಡ್ತಿಯೇ ಆಗುತ್ತಾರೆ ಎಂದು ಹೇಳಿದ್ದಾರೆ.
ಮತಯಾಚನೆಗೆ ಹೋಗುವಾಗ ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಹೋಗಬೇಕು ಅದನ್ನು ಬಿಟ್ಟು ಜಾತಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಬಾರದು ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.