ಕನ್ನಡ ನಾಡಿನ ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ, ಪಂಪ ಪ್ರಶಸ್ತಿ ಪುರಸ್ಕೃತ ಕೆ.ಎಸ್. ನಿಸಾರ್ ಅಹಮದ್ ಭಾನುವಾರದಂದು (ಮೇ.3) ಇಹಲೋಕ ತ್ಯಜಿಸಿದರು.
ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ನಿಸಾರ್ ಅಹಮದ್ ಅವರ ಪೂರ್ಣ ಹೆಸರು ‘ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್. ಇವರು ರಚಿಸಿದ “ಜೋಗದ ಸಿರಿ ಬೆಳಕಿನಲ್ಲಿ” ಗೀತೆ ನಾಡಿನ ಉದ್ದಗಲಕ್ಕೂ ಪ್ರಸಿದ್ಧಿ ಪಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದ ಇವರು ಕನ್ನಡ ಸಾಹಿತ್ಯ ಲೋಕದ ಅಪರೂಪದ ರತ್ನ. ನಿಸಾರ್ ಅಹಮದ್ ಸುಮಾರು 25 ಕೃತಿಗಳನ್ನು ರಚಿಸಿದ್ದು, ನಿತ್ಯೋತ್ಸವ ಹಾಗೂ ಗಾಂಧಿ ಬಜಾರ್ ಇವರ ಪ್ರಸಿದ್ಧ ಕವನ ಸಂಕಲನಗಳು. ಅಲ್ಲದೇ ಕನ್ನಡದಲ್ಲಿ ಪ್ರಥಮ ಬಾರಿಗೆ ಭಾವಗೀತೆ ಕ್ಯಾಸೆಟ್ ತಂದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ. 21 ಕವನ ಸಂಕಲನ, 14 ವೈಚಾರಿಕ ಕೃತಿ, ಮಕ್ಕಳ ಸಾಹಿತ್ಯ, ಅನುವಾದ, ಸಂಪಾದನಾ ಗ್ರಂಥ ಎಲ್ಲದರಲ್ಲಿಯೂ ನಿಸಾರ್ ಪ್ರೌಢಿಮೆ ಸಾಧಿಸಿದ್ದರು. ನಿಸಾರ್ ಅಹಮದ್ ಅವರನ್ನು ಸಾಹಿತ್ಯ ಲೋಕ ಸಂವೇದನಾಶೀಲ ಕವಿ ಎಂದೇ ಕೊಂಡಾಡುತ್ತದೆ. 1978 ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ. ಸುಗಮ ಸಂಗೀತದೊಂದಿಗೆ ಬೆಸೆದುಕೊಂಡಿದೆ. ನಾಡಗೀತೆ, ರೈತಗೀತೆಯೊಂದಿಗಿನ ಸ್ಥಾನವನ್ನು ನಿತ್ಯೋತ್ಸವ ಕವಿತೆ ಹೊಂದಿದೆ.
ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 5 ಫೆಬ್ರವರಿ 1936 ರಲ್ಲಿ ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994 ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
2003ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊಫೆಸರ್ ನಿಸಾರ್ ಅಹಮದ್ ಅವರು ಆಯ್ಕೆಗೊಂಡಿದ್ದರು. ಕೇಂದ್ರ ಸರಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಗೌರವಕ್ಕೂ ನಮ್ಮ ನಿತ್ಯೋತ್ಸವದ ಕವಿ ನಿಸಾರ್ ಪಾತ್ರರಾಗಿದ್ದರು. ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಎಂ.ಸಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ, ಎಲ್. ಗುಂಡಪ್ಪ ಮೊದಲಾದ ಗುರುಗಳ ಪ್ರಭಾವಕ್ಕೊಳಗಾಗಿದ್ದ ನಿಸಾರ್ ಅವರಲ್ಲಿ ಸಹಜವಾಗಿಯೇ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು.
ಪ್ರಶಸ್ತಿ ಪುರಸ್ಕಾರಗಳು* 2006 ರ ಮಾಸ್ತಿ ಪ್ರಶಸ್ತಿ* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ* ಗೊರೂರು ಪ್ರಶಸ್ತಿ* ಅನಕೃ ಪ್ರಶಸ್ತಿ* ಕೆಂಪೇಗೌಡ ಪ್ರಶಸ್ತಿ* ಪಂಪ ಪ್ರಶಸ್ತಿ* 1981 ರ ರಾಜ್ಯೋತ್ಸವ ಪ್ರಶಸ್ತಿ* 2003 ರ ನಾಡೋಜ ಪ್ರಶಸ್ತಿ* 2006 ರ ಅರಸು ಪ್ರಶಸ್ತಿ.
ಇತ್ತೀಚೆಗಷ್ಟೇ 15 ದಿನಗಳ ಹಿಂದೆ ಅಮೆರಿಕದಲ್ಲಿದ್ದ ಅವರ ಪುತ್ರ ಕೂಡ ನಿಧನರಾಗಿದ್ದರು. ಇದರಿಂದ ನಿಸಾರ್ ಅಹಮದ್ ಮಾನಸಿಕವಾಗಿ ಅವರು ತೀವ್ರ ಆಘಾತಕ್ಕೊಳಗಾಗಿದ್ದರು ಇಂತಹ ಕವಿ ಇದೀಗ ವಯೋ ಸಹಜ ಕಾಯಿಲೆಯಿಂದಾಗಿ ನಿಧನರಾಗಿದ್ದಾರೆ. ಈ ಮೂಲಕ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ.