ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್
ಬೆಂಗಳೂರು:ಕೆಲವರಿಗೆ ಜನರನ್ನು ಲೂಟಿ ಮಾಡಿ ಹಣ ಸಂಪಾದಿಸುವ ಚಪಲ ಇರುತ್ತದೆ. ನನಗೆ ಜನರ ಜೊತೆ ನಿಂತು ಅವರ ಸಹಾಯಕ್ಕೆ ನಿಲ್ಲುವ ಚಪಲ ಇದೆ. ಒಬ್ಬೊಬ್ಬರಿಗೆ ಒಂದೊಂದು ಚಪಲ ಇರುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿಗೆ ಮಾತನಾಡುವ ಚಪಲ ಇದೆ ಎಂದು ಕಾಂಗ್ರೆಸ್ ನಾಯಕನೊಬ್ಬ ಮಾಡಿದ ಟೀಕೆಗೆ ತಿರುಗೇಟು ನೀಡಿದರು.
“ನಿಮ್ಮದೊಂದು ರೀತಿ ಚಪಲ, ನನ್ನದೊಂದು ರೀತಿ ಚಪಲ. ನಿಮ್ಮದು ಹಣ ಮಾಡುವ ಚಪಲ. ನನ್ನದು ಜನರೊಂದಿಗೆ ಸ್ಪಂದಿಸಿ ಅವರ ಬೆಂಬಲ ಪಡೆಯುವ ಚಪಲ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ” ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು.
ಸ್ವಜಾತಿಯವರಿಂದಲೇ ಅನ್ಯಾಯ ಆಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಆ ವರದಿಯನ್ನು ನೋಡಿದ್ದೇನೆ. ಕಷ್ಟ ಬಂದ ಕ್ಯಾಸ್ಟ್ ಅಂತಾರೆ. ಆದರೆ ಅವರು ಪ್ರತಿನಿಧಿಸುವ ಜಾತಿಗೆ ಬೆಳಗ್ಗೆಯಿಂದ ಸಂಜೆವರೆಗೂ ಏನು ಮಾಡಿದ್ದಾರೆ? ಕ್ಷಣ ಕ್ಷಣವೂ ರಾಜ್ಯವನ್ನು ಲೂಟಿ ಮಾಡುವುದೇ ಅವರ ಕೆಲಸವಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ಜನರ ಬೆಂಬಲ ಯಾವ ರೀತಿ ಪಡೆಯಬೇಕು ಎನ್ನುವುದಕ್ಕಿಂತ ಹಣ ಹೊಡೆಯಬೇಕು ಎಂಬುದರಲ್ಲೇ ತೊಡಗಿರುವವರಿಗೆ ಜಾತಿ ಹೆಸರಿನಲ್ಲಿ ಬೆಂಬಲ ಸಿಗುತ್ತದೆಯಾ?” ಎಂದು ಪ್ರಶ್ನಿಸಿದರು.
“ನಾನು ಬಾಯಿ ಚಪಲಕ್ಕೆ ಮಾತಾಡುವುದಿಲ್ಲ. ಇಂಥವರು ನಡೆಸುವ ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದಷ್ಟೇ ನನ್ನ ಉದ್ದೇಶ. ನಾನು ಮಾತನಾಡುವುದು ಜನರೊಂದಿಗೆ ನನ್ನ ಸಂಬಂಧ ಬಲಪಡಿಸಲು” ಎಂದು ಹೇಳಿದರು.






