ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಆಸ್ತಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ: ನ್ಯಾಷನಲ್ ಹೆರಾಲ್ಡ್ ಈ ದೇಶದ ಆಸ್ತಿ. ದ್ವೇಷ ರಾಜಕಾರಣ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ ಎಂಬುದಕ್ಕೆ ಮಂಗಳವಾರ ಬಂದ ನ್ಯಾಯಾಲಯದ ಆದೇಶವೇ ಸಾಕ್ಷಿ. ಸತ್ಯ ಮೇವ ಜಯತೆ, ಬಿಜೆಪಿಗಿಲ್ಲ ಘನತೆ. ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಬುಧವಾರ ನಡೆದ ಧರಣಿಯಲ್ಲಿ ಹಾಗೂ ನಂತರ ಮಾಧ್ಯಮಗಳ ಜೊತೆ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಮಾತನಾಡಿದರು.
ಇಂದು ಸತ್ಯಕ್ಕೆ ಜಯ ಸಿಕ್ಕಿದೆ. 1937ರಲ್ಲಿ ನಮ್ಮ ನಾಯಕರಾಗಿದ್ದ ಜವಹಾರ್ ಲಾಲ್ ನೆಹರು ಅವರು ಜನರ ಧ್ವನಿಯಾಗಬೇಕು ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಿದರು. ಆಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಲು ಈ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಮಹಾತ್ಮಾ ಗಾಂಧಿ ಅಥವಾ ನೆಹರು ಅವರ ಆಸ್ತಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ಪಕ್ಷದಲ್ಲಿ ಯಾರೇ ಅಧ್ಯಕ್ಷರಾದರೂ ಈ ಸಂಸ್ಥೆಯ ಷೇರುದಾರರಾಗುತ್ತಾರೆ. ಇದರ ಜವಾಬ್ದಾರಿ ಹೊರುತ್ತಾರೆ. ಆದರೆ ಬಿಜೆಪಿಯವರು ಯಂಗ್ ಇಂಡಿಯಾ ಸಂಸ್ಥೆ ಹಾಗೂ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಆಸ್ತಿಯನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿ ನೀಡದ ದೂರಿನ ಮೇಲೆ ನಮ್ಮ ನಾಯಕ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ಇ.ಡಿ ತನಿಖಾ ಸಂಸ್ಥೆ ಮೂಲಕ ತನಿಖೆ ಮಾಡಿಸುತ್ತಿದ್ದಾರೆ” ಎಂದು ಹೇಳಿದರು.
“ಈ ಪ್ರಕರಣದಲ್ಲಿ ಇ.ಡಿ ಸಂಸ್ಥೆ ನನಗೆ, ನನ್ನ ಸಹೋದರನಿಗೆ, ದಿವಂಗತ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಕುಟುಂಬದವರಿಗೆ ನೋಟೀಸ್ ನೀಡಿತ್ತು. ಈ ಸಂಸ್ಥೆಗೆ ನಮ್ಮ ಅನೇಕ ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ. ಆಸ್ಕರ್ ಫರ್ನಾಂಡೀಸ್ ಅವರು ಈ ಸಂಸ್ಥೆಯ ಮಂಡಳಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಮ್ಮ ಜೊತೆಯಲ್ಲಿ ಸಿಎಂ ಇದ್ದಾರೆ. ನನ್ನ ನೀರಾವರಿ ಇಲಾಖೆಯ ಅನೇಕ ನಿಗಮಗಳಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ನಮ್ಮ ಅನೇಕ ಶಾಸಕರು, ಕಾರ್ಯಕರ್ತರು ವಿವಿಧ ನಿಗಮ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರುಗಳು ಅಧ್ಯಕ್ಷರಾಗಿರುವ ಕಾರಣ ಅವರ ಹೆಸರಿಗೆ ಒಂದೆರಡು ಷೇರುಗಳನ್ನು ನೀಡಲಾಗುತ್ತದೆ. ನಮ್ಮ ಅಧಿಕಾರ ಹೋದ ಬಳಿಕ ಈ ಅಧಿಕಾರ ವರ್ಗಾವಣೆಯಾಗುತ್ತದೆ” ಎಂದು ವಿವರಿಸಿದರು.
“ಇದೇ ರೀತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಈ ಸಂಸ್ಥೆಯ ಜವಾಬ್ದಾರಿ ಹೊಂದಿದ್ದರು. ಈ ಸಂಸ್ಥೆಯ ಅಡಿಯಲ್ಲಿ ಅನೇಕ ಆಸ್ತಿಗಳಿವೆ. ಕಾಂಗ್ರೆಸ್ ಭವನ ಟ್ರಸ್ಟ್ ಎಂದು ಬೆಂಗಳೂರಿನಲ್ಲಿ ಇದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷನಾಗಿರುವ ನಾನು ಈಗ ಆ ಟ್ರಸ್ಟ್ ಗೆ ಅಧ್ಯಕ್ಷನಾಗಿದ್ದೇನೆ. ಸಿಎಲ್ ಪಿ ನಾಯಕರಾಗಿ ಸಿಎಂ ಅವರು ಟ್ರಸ್ಟಿಯಾಗಿದ್ದಾರೆ. ಹೀಗಾಗಿ ಈ ಕಾಂಗ್ರೆಸ್ ಭವನ ಟ್ರಸ್ಟ್ ಆಸ್ತಿ ನಮ್ಮ ಆಸ್ತಿಯಾಗುತ್ತದೆಯೇ? ನೂರಾರು ಕಾಂಗ್ರೆಸ್ ಕಟ್ಟಡಗಳು ಈ ಟ್ರಸ್ಟ್ ಅಡಿಯಲ್ಲಿವೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿರುವವರೆಗೂ ನಾನು ಅದರ ಅಧ್ಯಕ್ಷನಾಗಿರುತ್ತೇನೆ, ನಾನು ಹೋದ ಬಳಿಕ ಯಾರು ಬರುತ್ತಾರೋ, ಅವರು ಇದರ ಜವಾಬ್ದಾರಿ ಹೊರುತ್ತಾರೆ” ಎಂದರು.






