ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾಗಾಂಧಿ, ರಾಹುಲ್ʼಗೆ ರಿಲೀಫ್
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ನ್ಯಾಯಾಲಯದಿಂದ ರಿಲೀಫ್ ದೊರೆತಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಜಾರಿ ನಿರ್ದೇಶನಾಲಯ (ಇಡಿ) ಮುಂದಿನ ತನಿಖೆಯನ್ನು ಮುಂದುವರೆಸಬಹುದು ಎಂದು ಹೇಳಿದೆ.
ಆದರೆ, ಇಡಿ ದಾಖಲಿಸಿರುವ ಪ್ರಕರಣವು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರು ಹಾಗೂ ಮ್ಯಾಜಿಸ್ಟ್ರೇಟ್ ನೀಡಿದ ಸಮನ್ಸ್ ಆದೇಶಗಳ ಆಧಾರಿತವಾಗಿದ್ದು, ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧರಿತವಾಗಿಲ್ಲ. ಈ ಕಾರಣದಿಂದ ಈ ಹಂತದಲ್ಲಿ ಇಡಿ ಪ್ರಕರಣವನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದೇ ಸಂದರ್ಭದಲ್ಲಿ, ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ದಾಖಲಿಸಿರುವ ಹೊಸ ಎಫ್‌ಐಆರ್‌ನಿಂದ ಉದ್ಭವಿಸಿದ ವಿಚಾರಣೆಯಲ್ಲಿ ಕೂಡ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಹುಲ್ ಗಾಂಧಿ,
ಸೋನಿಯಾ ಗಾಂಧಿ ಸೇರಿದಂತೆ ಇತರ ಆರೋಪಿಗಳು ಈ ಎಫ್‌ಐಆರ್‌ನ ಪ್ರತಿಯನ್ನು ಪಡೆಯಲು ಅರ್ಹರಲ್ಲ ಎಂದು ರೌಸ್ ಅವೆನ್ಯೂ ನ್ಯಾಯಾಲಯ ತೀರ್ಮಾನಿಸಿದೆ. ನ್ಯಾಯಾಲಯದ ಈ ಆದೇಶವನ್ನು ಗಾಂಧಿ ಕುಟುಂಬಕ್ಕೆ ಕಾನೂನು ಮಟ್ಟದಲ್ಲಿ ದೊಡ್ಡ ನಿರಾಳತೆ ಎಂದು ಪರಿಗಣಿಸಲಾಗುತ್ತಿದೆ.






