ಜೂನ್ 18ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್‌ನ ಸೌತಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಾದ ಬಳಿಕ ಇಂಗ್ಲೆಂಡ್ ನೆಲದಲ್ಲಿಯೇ ಆಗಸ್ಟ್ 4ರಿಂದ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಜೂನ್ 18ರಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಈಗಾಗಲೇ ಸಾಕಷ್ಟು ಮಾಜಿ ಆಟಗಾರರು ಮತ್ತು ಕ್ರಿಕೆಟ್ ಪಂಡಿತರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಯಾವ ತಂಡ ಗೆಲ್ಲಲಿದೆ ಮತ್ತು ಗೆಲ್ಲುವುದಕ್ಕೆ ಯಾವ ರೀತಿಯ ತಂತ್ರಗಳನ್ನು ಹೆಣೆಯಬೇಕು ಎಂಬುದರ ಕುರಿತು ಚರ್ಚಿಸಿದ್ದು ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿತ್ ಅಗರ್ಕರ್ ಭಾರತ ತಂಡಕ್ಕೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
‘ಭಾರತೀಯ ಆಟಗಾರರು ನ್ಯೂಜಿಲೆಂಡ್ ತಂಡವನ್ನು ಸಾಮಾನ್ಯ ಅಥವಾ ಕಳಪೆ ತಂಡ ಎಂದು ಕಡೆಗಣಿಸುವಂತಿಲ್ಲ. ನ್ಯೂಜಿಲೆಂಡ್ ಒಂದು ಸಾಮಾನ್ಯ ತಂಡ ಎಂಬ ಮಾತು ಯಾವತ್ತೋ ಹೊರಟುಹೋಗಿದೆ. ನ್ಯೂಜಿಲೆಂಡ್ ತಂಡ ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಠವಾಗಿದ್ದು ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ನ್ಯೂಜಿಲೆಂಡ್ ಸಾಮರ್ಥ್ಯವನ್ನು ಕಳಪೆಯಾಗಿ ನೋಡಬಾರದು ಹಾಗೂ ನ್ಯೂಜಿಲೆಂಡ್ ತಂಡವನ್ನು ಮಣಿಸಲು ಟೀಂ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡಬೇಕು’ ಎಂದು ಹೇಳುವುದರ ಮೂಲಕ ಅಜಿತ್ ಅಗರ್ಕರ್ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.