ಪ್ರವಾಸಿಗರ ಗಮನಕ್ಕೆ: ಇಂದಿನಿಂದ 3 ದಿನಗಳು ನಂದಿಬೆಟ್ಟದ ಪ್ರವೇಶಕ್ಕೆ ನಿರ್ಬಂಧ!
ಚಿಕ್ಕಬಳ್ಳಾಪುರ:- ಇಂದಿನಿಂದ ಮೂರು ದಿನಗಳ ಕಾಲ ನಂದಿ ಬೆಟ್ಟದ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ. ಇಂದು ಸಂಜೆ 5 ಗಂಟೆಯಿಂದ ಜೂ.20ರ ಬೆಳಿಗ್ಗೆ 5 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ನಂದಿಗಿರಿಧಾಮದ ಮೇಲ್ಭಾಗದಲ್ಲಿರುವ ವಸತಿ ಕೊಠಡಿಗಳ ಬುಕಿಂಗ್‌ಗೂ ನಿಷೇಧ ವಿಧಿಸಿದ್ದಾರೆ.
ಇದೇ ಮೊದಲ ಬಾರಿಗೆ ನಂದಿಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ನಡೆಯಲಿದ್ದು, ಸಭೆಗೆ ಬೇಕಾದ ಅಗತ್ಯ ಸಿದ್ಧತೆ ಸಲುವಾಗಿ ಮೂರು ದಿನಗಳ ಮೊದಲೇ ಪ್ರವಾಸಿಗರ ಪ್ರವೇಶ ಹಾಗೂ ವಾಹನಗಳ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ.
ಸಚಿವ ಸಂಪುಟ ಸಭೆಗೆ ಸಿಎಂ, ಡಿಸಿಎಂ ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಎಲ್ಲಾ ಮಂತ್ರಿಗಳು, ಶಾಸನ ಸಭಾ ಹಾಗೂ ವಿಧಾನಸಭಾ ಸದಸ್ಯರು, ಇಲಾಖಾ ಮುಖ್ಯಸ್ಥರು ಹಾಗೂ ಪತ್ರಕರ್ತರು ಆಗಮಿಸುತ್ತಿದ್ದಾರೆ. ಆದ್ದರಿಂದ ನಂದಿಗಿರಿಧಾಮಕ್ಕೆ ಹೋಗಲು ಮತ್ತು ಬರಲು ಒಂದೇ ರಸ್ತೆ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಜೊತೆಗೆ ನಂದಿಬೆಟ್ಟದಲ್ಲಿ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಅತಿ ಕಷ್ಟಕರವಾಗಿರುತ್ತದೆ. ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ






