ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 23ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಲಿರುವುದು ಖಚಿತವಾಗಿದೆ. ಈ ವೇಳೆ ದಿವಂಗತ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಉದ್ಘಾಟನೆಯನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.
ಇದಕ್ಕೂ ಜೊತೆಗೆ ನಿರ್ಮಲಾನಂದನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಲಿರುವ ಅವರು, ಶ್ರೀಕ್ಷೇತ್ರದ ಮಹತ್ವ ಹಾಗೂ ಧಾರ್ಮಿಕ ವಿಚಾರಗಳ ಕುರಿತು ಭಾಷಣ ಮಾಡುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಅವರ ಈ ಮಹತ್ವದ ಪ್ರವಾಸದ ಬಗ್ಗೆ ಚುಂಚನಗಿರಿ ಶ್ರೀಗಳಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಈ ಭೇಟಿ ಮಂಡ್ಯ ಜಿಲ್ಲೆಯಲ್ಲಿ ಧಾರ್ಮಿಕ ಹಾಗೂ ರಾಜಕೀಯ ಮಹತ್ವ ಪಡೆದುಕೊಳ್ಳಲಿದೆ.






