ನಯಾ ಪೈಸೆ ಇಲ್ಲದೆ ಕಂಪನಿ ಶುರುಮಾಡಿದಾತ ಇವತ್ತು ಕೋಟಿ ಕೋಟಿ ಒಡೆಯ!
ಬನ್ವಾರಿ ಲಾಲ್ ಮಿತ್ತಲ್. ಜೀವನದಲ್ಲಿ ಕಷ್ಟಪಟ್ಟರೆ ಬಡತನದಲ್ಲಿ ಇರುವವರೂ ಮುಂದೊಂದು ದಿನ ಶ್ರೀಮಂತರಾಗಬಹುದು ಎನ್ನುವುದಕ್ಕೆ ಇವರೇ ಉತ್ತಮ ಉದಾಹರಣೆ. ನಿಮ್ಮ ಕನಸುಗಳನ್ನು ನಂಬಿ ಅದರೆಡೆಗೆ ಸಾಗಲು ಕಷ್ಟಪಟ್ಟು ಕೆಲಸ ಮಾಡಿ ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿದರೆ ಯಶಸ್ಸು ಖಂಡಿತ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎನ್ನುವುದನ್ನು ಈ ವ್ಯಕ್ತಿ ತಮ್ಮ ಅನುಭವದಿಂದ ಹೇಳಿದ್ದು.
ಈ ಬನ್ವಾರಿ ಲಾಲ್ ಮಿತ್ತಲ್ ಹುಟ್ಟಿದ್ದು ರಾಜಸ್ಥಾನದ ಒಂದು ಮಧ್ಯಮ ವರ್ಗದ ಪರಿವಾರದಲ್ಲಿ. ಇವರ ತಂದೆ ಸಲ್ವಾರ್ ಲಾಲ್ ಮಿತ್ತಲ್. ಕೊಲ್ಕತ್ತಾದಲ್ಲಿ ಸಣ್ಣ ಬಟ್ಟೆ ವ್ಯಾಪಾರಿ. ಸಲ್ವಾರ್ ಲಾಲ್ ಅವರ 6 ಮಕ್ಕಳಲ್ಲಿ ಬನ್ವಾರಿ ಲಾಲ್ ಮಿತ್ತಲ್ 5ನೇಯವರು. ಊರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಲಾಲ್ , ಕಾಲೇಜು ಓದಲು ಕೊಲ್ಕತ್ತಾಗೆ ಹೋದರು. ಇವರ ತಂದೆ ನಿನ್ನ ಖರ್ಚನ್ನು ನೀನೇ ನೋಡಿಕೊಳ್ಳಬೇಕೆಂಬ ಷರತ್ತನ್ನುವಿಧಿಸಿ, ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಏನಾದರೂ ದೊಡ್ಡದನ್ನು ಸಾಧಿಸಿ ಎಂದು ಆಶೀರ್ವದಿಸಿದರಂತೆ.
ಆಗ ಬನ್ವಾರಿ ಲಾಲ್, ಉಮೇಶ್ಚಂದ್ರ ಕಾಲೇಜಿನಲ್ಲಿ ಕಾಮರ್ಸ್ ಓದಲು ಶುರು ಮಾಡಿದರು, ಇದರ ಜೊತೆ ಜೊತೆಗೆ ಚಾರ್ಟಿಡ್ ಅಕೌಂಟೆನ್ಸಿ ವ್ಯಾಸಂಗಕ್ಕಾಗಿ ಟ್ಯೂಷನ್ ಸೇರಿದಲ್ಲದೆ, ಖರ್ಚಿಗಾಗಿ ಹಿಂದಿ ಟೈಪಿಂಗ್ ಕೆಲಸಕ್ಕೂ ಸೇರುತ್ತಾರೆ. ಆಗ ಕೊಲ್ಕತ್ತಾದಲ್ಲಿ ಹಿಂದಿ ಟೈಪಿಸ್ಟ್ ಗಳ ಅವಶ್ಯಕತೆ ತುಂಬಾನೇ ಇರುತ್ತದೆ. ಇದಕ್ಕಾಗಿ ಲಾಲ್ ಗೆ ತಿಂಗಳಿಗೆ 1800 ರೂಪಾಯಿ ಸಂಬಳ ಸಿಗುತ್ತದೆ. ನಿತ್ಯ ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಕಾಲೇಜು, ಮಧ್ಯಾಹ್ನ ಸಿಎ ಟ್ಯೂಷನ್, ಸಂಜೆ ಹಿಂದಿ ಟೈಪಿಂಗ್ ಕೆಲಸಕ್ಕೆ ಹೋಗುತ್ತಿದ್ದು, ಇಷ್ಟು ಬಿಡುವಿಲ್ಲದೆ ಸಮಯದ ನಡುವೆಯೂ ಹೇಗೋ ಕಾಲೇಜು ಮುಗಿಸಿದರು.
ಇನ್ನು 1992ರಲ್ಲಿ ಪ್ರತಿಷ್ಠಿತ ಬಿರ್ಲಾ ಗ್ರೂಪ್ ಇವರನ್ನು ತೆರಿಗೆ ಮತ್ತು ಹಣಕಾಸು ವ್ಯವಸ್ಥಾಪಕನಾಗಿ ನೇಮಿಸಿಕೊಂಡಿತು. ಇಲ್ಲಿ ಇವರಿಗೆ ತಿಂಗಳಿಗೆ ಸಂಬಳ 4 ಸಾವಿರ ರೂಪಾಯಿ. ನೋಡಿ, ಬಿರ್ಲಾ ಗ್ರೂಪ್ ಕಂಪನಿಯಲ್ಲಿ 8 ವರ್ಷ ಸುಧೀರ್ಘ ಕಾರ್ಯನಿರ್ವಹಿಸಿದ ಲಾಲ್ ಏನಾದರೂ ಸಾಧಿಸಬೇಕೆಂದು 2000ರಲ್ಲಿ ಕೆಲಸಕ್ಕೆ ವಿರಾಮ ಹೇಳುತ್ತಾರೆ. 2002ರಲ್ಲಿ ಮೈಕ್ರೋಸೆಕ್ ಪೈನಾನ್ಪಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಸ್ಟಾಕ್ ಬ್ರೋಕಿಂಗ್ ಕಂಪನಿ ಆರಂಭಿಸುತ್ತಾರೆ. ಇದರಲ್ಲಿ ಒಟ್ಟು ಹೂಡಿಕೆ ಎರಡೂವರೆ ಕೋಟಿ ರೂಪಾಯಿ. ಸಾಲ ಮತ್ತು ಸ್ವಲ್ಪ ಕೂಡಿಟ್ಟ ಹಣದಿಂದ ಕಂಪನಿ ಶುರು ಮಾಡುತ್ತಾರೆ.
ಆರಂಭದಲ್ಲಿ 60 ಲಕ್ಷ ವೆಚ್ಚದಲ್ಲಿ ಎರಡೂವರೆ ಸಾವಿರ ಅಡಿಯಲ್ಲಿ ಆಫೀಸ್ ಜಾಗ ಖರೀದಿಸುತ್ತಾರೆ. ಆಗ ಆಫೀಸ್ ನಲ್ಲಿ ಮೂರೇ ಜನ ಸಿಬ್ಬಂದಿ. ಆಮೇಲೆ, 2005ರಲ್ಲಿ ದಕ್ಷಿಣ ಕೊಲ್ಕತ್ತಾದಲ್ಲಿ ಮೂರುವರೆ ಕೋಟಿ ರೂಪಾಯಿಯಲ್ಲಿ ಆಫೀಸ್ ಜಾಗ ಖರೀದಿಸುತ್ತಾರೆ. ಹೀಗೆ , ಲಾಲ್ 2010ರ ವೇಳೆ 45 ಕೋಟಿ ವಹಿವಾಟು ಇರುತ್ತದೆ. ಈ ನಡುವೆಯೇ 2011ಬ್ಯುಸಿನೆಸ್ ನಲ್ಲಿ ಸ್ವಲ್ಪ ಹೊಡೆತ ಬೀಳುತ್ತದೆ. 2014ರಲ್ಲಿ ಅವರು ಆರೋಗ್ಯ ಮತ್ತು ಔಷಧಿ ಕ್ಷೇತ್ರಕ್ಕೆ ಧುಮಕುತ್ತಾರೆ. 150 ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ ಸಸ್ತಾಸುಂದರ್ ಎಂಬ ಇ-ಫಾರ್ಮಸಿ ಕಂಪನಿ ಶುರು ಮಾಡಿಯೇ ಬಿಡುತ್ತಾರೆ.
ಲಾಲ್ ಅವರ ಇ-ಫಾರ್ಮಸಿ, 2015ರಲ್ಲಿ 20 ಕೋಟಿ, 2016ರಲ್ಲಿ 65 ಕೋಟಿ ವಹಿವಾಟು ನಡೆಸಿ ದೇಶದಲ್ಲಿಯೇ ಅತಿ ದೊಡ್ಡ ಹಾಗೂ ಯಶಸ್ಸಿ ಕಂಪನಿಯಾಗಿ ಹೊರಹೊಮ್ಮುತ್ತದೆ. ಹೀಗೆಯೇ ಈ ಕಂಪನಿ 6 ಸಾವಿರ ಕೋಟಿ ವಹಿವಾಟು ನಡೆಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಇನ್ನು ಬನ್ವಾರಿ ಲಾಲ್ ಬರೀ ಹಣ ಮಾಡುವುದಲ್ಲೇ ನಿರತವಾಗಲಿಲ್ಲ. ತಮ್ಮ ಸಂಪಾದಿಸಿದ ಹಣದಿಂದ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತ ಬರುತ್ತಿರುವುದು ಅವರೀಗಿರುವ ಸಾಮಾಜಿಕ ಕಳಕಳಿ ಪ್ರತಿಬಿಂಬಿಸುತ್ತದೆ.
ಏನೇ ಹೇಳಿ, ಒಬ್ಬ ಶ್ರೀಸಾಮಾನ್ಯ ವ್ಯಕ್ತಿ, ಜೀವನದಲ್ಲಿ ಕಷ್ಟಪಟ್ಟು ದುಡಿದರೆ, ಮುಂದೊಂದು ದಿನ ಶ್ರೀಮಂತರಾಗಬಹುದು ಅನ್ನುವುದಕ್ಕೆ ಬನ್ವಾರಿ ಲಾಲ್ ಮಿತ್ತಲ್ ಅವರೇ ಸಾಕ್ಷಿ ಅಲ್ಲವೇ?