ಅರೆ, ಖಾದರ್ ಯಾಕೆ ಬಸ್ ಚಾಲಕರಾದರು ಎಂದು ಪ್ರಶ್ನೆ ಮಾಡುತ್ತಿದ್ದೀರಾ? ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವಾಗ ಮಂಗಳೂರಿಗೆ ಬಂದರೂ ಪ್ರತೀ ಸಲ ಅವರ ಕಾರು ಚಾಲಕರಾಗುವ ಶಾಸಕ ಯು ಟಿ ಖಾದರ್ ನಿನ್ನೆ ಬಸ್ಸು ಚಾಲಕರಾದರು!
ಹೌದು ಮಂಗಳೂರು – ಕೊಜಪಾಡಿ ಕೆ ಎಸ್ ಆರ್ ಟಿ ಸಿ ಬಸ್ ಸೇವೆಗೆ ಕ್ರಿಸ್ಮಸ್ ಹಬ್ಬದ ದಿನವಾದ ನಿನ್ನೆ ಚಾಲನೆ ನೀಡಲಾಯಿತು. ಖಾದರ್ ಸಂಚಾರಕ್ಕೆ ಚಾಲನೆ ನೀಡಿ ಗ್ರಾಮಚಾವಡಿ ಜಂಕ್ಷನ್ನಿನಲ್ಲಿ ತಾವೇ ಖುದ್ದಾಗಿ ಬಸ್ಸನ್ನು ಚಲಾಯಿಸುವ ಮೂಲಕ ನೆರೆದಿದ್ದ ಪ್ರತಿಯೊಬ್ಬರಲ್ಲೂ ಅಚ್ಚರಿ ಮೂಡಿಸಿದರು.
ಆಮೇಲೆ ಮಾತನಾಡಿ, ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಬಸ್ಸುಗಳನ್ನು ನೀಡುವ ಉದ್ದೇಶವಿದೆ. ಪ್ರಸ್ತುತ ಪಜೀರು-ಪಾನೇಲ, ದೇರಳಕಟ್ಟೆ-ರೆಂಜಾಡಿ-ಅ0ಬ್ಲಮೊಗರು ರಸ್ತೆಗೆ ಸರಕಾರಿ ಬಸ್ಸು ಓಡಿಸಲು ಸರ್ವೆ ನಡೆದಿದೆ ಎಂದು ಅವರು ತಿಳಿಸಿದರು. ನಾಟೆಕಲ್- ಮಂಜನಾಡಿ ರಸ್ತೆಯಲ್ಲೂ ಸರಕಾರಿಬಸ್ಸು ಹಾಕುವ ಯೋಜನೆ ಕೂಡ ಇದೆ, ಆದರೆ ಈ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಸಾಧ್ಯವಾಗಿಲ್ಲ. ಖಾಯಂ ಅನುಮತಿ ಸಿಕ್ಕಿದ ನಂತರ ಬಸ್ಸು ಓಡಿಸಲಾಗುವುದು. ಕೊಜಪಾಡಿ ಬಸ್ಸು ಐದು ಗ್ರಾಮಗಳ ಜನರಿಗೆ ಸಹಕಾರಿಯಾಗಲಿದೆ. ನಾಟೆಕಲ್ಲಿನಲ್ಲಿ ಶೀಘ್ರದಲ್ಲೇ ತಾತ್ಕಾಲಿಕ ತಾಲ್ಲೂಕು ಕಚೇರಿ ರಚನೆ, ಹರೇಕಳದಿಂದ ಅಡ್ಯಾರಿಗೆ ಹೋಗುವ ಸೇತುವೆಯ ಕಾಮಗಾರಿ, ಶಾಶ್ವತ ಕುಡಿಯುವ ನೀರಿನ ಯೋಜನೆ, 30 ಕೋಟಿ ಅನುದಾನದಡಿ ಗ್ರಾಮೀಣ ಭಾಗದ ರಸ್ತೆಗಳ ಕಾಂಕ್ರೀಟಿಕರಣ ನಡೆಸಲಾಗುವುದು ಎಂದು ಖಾದರ್ ಹೇಳಿದರು.