ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಆರಂಭಕ್ಕೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಇದೀಗ ಎಲ್ಲರ ಕುತೂಹಲ ಇರುವುದು ಈ ಬಾರಿ ದೊಡ್ಮನೆ ಒಳಗೆ ಯಾರೆಲ್ಲ ಹೋಗುತ್ತಾರೆ ಎಂಬುದು. ‘ಅವರು ಹೋಗಬಹುದಾ? ಇವರು ಹೋಗಬಹುದಾ’ ಅಂತ ವೀಕ್ಷಕರು ಕೂಡ ಲೆಕ್ಕಾಚಾರ ಹಾಕುತ್ತಲೇ ಇದ್ದಾರೆ. ಈ ಮಧ್ಯೆ ಕನ್ನಡದ ಜನಪ್ರಿಯ ನಟರೊಬ್ಬರ ಹೆಸರು ಕೂಡ ಚಾಲ್ತಿಗೆ ಬಂದಿತ್ತು. ಆದರೆ ಅವರು, ‘ನಾನು ಈ ಶೋಗೆ ಹೋಗುತ್ತಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದರೆ, ಅವರು ಯಾರು? ಸುಮಂತ್ ಶೈಲೇಂದ್ರ!
ದಿಲ್‌ವಾಲಾ, ಆಟ, ತಿರುಪತಿ ಎಕ್ಸ್‌ಪ್ರೆಸ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಸುಮಂತ್ ತೆಲುಗು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಈಚೆಗೆ ಅವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹೊಸ ‘ಗೋವಿಂದ ಗೋವಿಂದ’ ಸಿನಿಮಾದ ಪ್ರಚಾರಕಾರ್ಯಗಳಲ್ಲಿ ನಾನು ಬ್ಯುಸಿ ಇದ್ದೇನೆ. ಈ ಸಿನಿಮಾ ಏಪ್ರಿಲ್‌ನಲ್ಲಿ ರಿಲೀಸ್ ಆಗಲಿದೆ. ಹಾಗಾಗಿ, ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಸದ್ಯ ಹರಿದಾಡುತ್ತಿರುವ ವದಂತಿ ಪ್ರಕಾರ, ಸಿಲ್ಲಿ ಲಲ್ಲಿ ರವಿಶಂಕರ್, ವೈಷ್ಣವಿ ಗೌಡ, ಆರ್‌ಜೆ ರಾಜೇಶ್, ಅನುಷಾ ರಂಗನಾಥ್, ಗೀತಾ ಭಾರತಿ ಭಟ್, ರಾಘು ಗೌಡ ಮುಂತಾದವರ ಹೆಸರು ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಕಲರ್ಸ್ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಪ್ರತಿಕ್ರಿಯಿಸಿದ್ದಾರೆ.
‘ತುಂಬ ಜನರ ಹೆಸರುಗಳು ಓಡಾಡುತ್ತಿವೆ. ಬಹುತೇಕ ಅದೆಲ್ಲ ಸುಳ್ಳು. ನಾನು ಆ ಲಿಸ್ಟ್ ನೋಡಿ ಎಂಜಾಯ್ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.