ಬಿರುಗಾಳಿ ಮಳೆಗೆ ಬೆಚ್ಚಿ ಬಿದ್ದ ಬೆಂಗಳೂರು: ಹಲವು ಅವಾಂತರಗಳು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟಿಸಿದೆ. ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿರುವ ಘಟನೆ ಸಾಯಿಲೇಔಟ್ ನಲ್ಲಿ ನಡೆದಿದೆ. ಇದೇ ವರ್ಷದಲ್ಲಿ 2ನೇ ಬಾರಿ ಸಮಸ್ಯೆ ಎದುರಾಗಿದೆ. ಸಾಯಿಮಂದಿರಕ್ಕೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗ್ಗೆಯಾದರೂ ನೀರು ಮಾತ್ರ ಖಾಲಿಯಾಗಿಲ್ಲ. ರಾಜಕಾಲುವೆ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಹಾಗಾಗಿ ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ.
ಇನ್ನು ಭಾರತಿ ನಗರದಲ್ಲಿ ಕೆಲ ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಅಲ್ಲದೇ ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಜನಸಾಮಾನ್ಯರು ತೊಂದರೆ ಅನುಭವಿಸಿದರು. ಮಳೆಯ ಅವಾಂತರಕ್ಕೆ ಜಯನಗರ ಬಳಿಯ ಈಸ್ಟ್ ಎಂಡ್ ಸರ್ಕಲ್‌ನಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಈ ಮರವು ಆಟೋ ಮೇಲೆ ಬಿದ್ದು, ಆಟೋ ಜಖಂಗೊಂಡಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲು ಎಡೆಬಿಡದೇ ಸುರಿದ ಮಳೆಯಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಒಳಗೆ ಜನ ತುಂಬಿ ತುಳುಕಿದ ಕಾರಣ ಮೆಟ್ರೋ ರೈಲುಗಳು ನಿಲ್ಲಿಸದೇ ತೆರಳಿವೆ. ಕಬ್ಬನ್ ಪಾರ್ಕ್‌ನಲ್ಲಿ ಮೆಟ್ರೋ ನಿಲ್ಲಿಸದ ಕಾರಣ ಪ್ರಯಾಣಿಕರು ವಿಧಾನಸೌಧ ಇಲ್ಲವಾದಲ್ಲಿ ಎಂಜಿ ರೋಡ್‌ನಲ್ಲಿ ಇಳಿಯಬೇಕಾದ ಪರಿಸ್ಥಿತಿ ಎದುರಾಯಿತು.