ಬೆಂಗಳೂರಲ್ಲಿ ಧಾರಾಕಾರ ಮಳೆ: ಸಿಸಿಬಿ ಕಚೇರಿ ಜಲಾವೃತ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಂದ ಬೆಳಿಗ್ಗೆ 5:30ರವರೆಗೆ ಧಾರಾಕಾರ ಮಳೆ ಸುರಿದಿದ್ದು, 104 ಮಿಲಿಮೀಟರ್ ಮಳೆ ದಾಖಲಾಗಿದೆ. ಕಳೆದ ಒಂದು ದಶಕದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ.
ಹೌದು ಮಳೆಯಿಂದ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ಬೆಳ್ಳಂ ಬೆಳಗ್ಗೆ ವಾಹನ ಸವಾರರು ಪರದಾಡಿದರು. ಮಳೆಗೆ ಸುಬ್ಬಯ್ಯ ಸರ್ಕಲ್ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಭಾರಿ ಮಳೆಗೆ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿ ಒಳಗೆ ನೀರು ನುಗ್ಗಿದೆ. ಕಚೇರಿ ಆವರಣದಲ್ಲಿ ಕೆರೆಯಂತಾಗಿದೆ. ಸಿಸಿಬಿ ಕಚೇರಿ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಡಬಲ್ ರೋಡ್ನಲ್ಲಿ ಮೊಣಕಾಲಿನವರೆಗು ನೀರು ನಿಂತಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.






