ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಇಬ್ಬರು ಸಜೀವ ದಹನ!
ಬೆಂಗಳೂರು: ನಗರದ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದ್ದು, ಇನ್ನೂ ಮೂವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮುಂಜಾನೆ ಸುಮಾರು 3.30ರ ಹೊತ್ತಿಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಮೃತರಲ್ಲಿ ಒಬ್ಬರನ್ನು ಮದನ್ ಸಿಂಗ್ ಎಂದು ಗುರುತಿಸಲಾಗಿದೆ.
ಅಗ್ನಿ ಅವಘಡ ಸಂಭವಿಸಿದ ಕಟ್ಟಡವು ಒಟ್ಟು ನಾಲ್ಕು ಅಂತಸ್ತುಗಳಾಗಿದ್ದು, ಸಂದೀಪ್ ಮತ್ತು ಬಾಲಕೃಷ್ಣ ಅವರ ಒಡೆತನವಾಗಿದೆ. ನೆಲಮಹಡಿ ಹಾಗೂ ಎರಡನೇ ಮಹಡಿಯಲ್ಲಿ ಗೋಡೌನ್ ಇದ್ದು, ಮೊದಲ ಮಹಡಿಯಲ್ಲಿ ಮೂವರು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೂರನೇ ಮಹಡಿಯಲ್ಲಿ ಮದನ್ ಸಿಂಗ್ ಅವರ ಪತ್ನಿ ಸಂಗೀತಾ ಹಾಗೂ ಮಕ್ಕಳಾದ ವಿಹಾನ್ ಮತ್ತು ನಿತೇಶ್ ವಾಸವಿದ್ದು, ಘಟನೆಯ ವೇಳೆ ಮದನ್ ಸಿಂಗ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.