ಮಾ.26ರಂದು ರಾತ್ರಿ 7.30ರ ಸಮಯದಲ್ಲಿ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆಯ ಮುನೇಶ್ವರ ಬ್ಲಾಕ್‍ನಲ್ಲಿರುವ ಸರ್ಕಾರಿ ಆಟದ ಮೈದಾನದಲ್ಲಿ ಸಂತೋಷ್ ಮತ್ತು ಆತನ ಸ್ನೇಹಿತರು ಆಟವಾಡಿ ಕುಳಿತಿದ್ದರು. ಆ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಸಂತೋಷ್ ಮತ್ತು ಸ್ನೇಹಿತ ಸಂದೀಪ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಬಗ್ಗೆ ನಂದಿನಿ ಲೇಔಟ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಮುನಿರಾಜು ಅಲಿಯಾಸ್ ಮುನ್ನ ಮತ್ತು ಆತನ ಸಹಚರರು ಭಾಗಿಯಾಗಿರುವುದು ತಿಳಿದುಬಂದಿದೆ.
ಈ ಮಾಹಿತಿ ಆಧಾರದ ಮೇಲೆ ನಂದಿನಿ ಲೇಔಟ್ ಠಾಣೆ ಇನ್ಸ್‍ಪೆಕ್ಟರ್ ಲೋಹಿತ್, ಸಬ್‍ಇನ್ಸ್‍ಪೆಕ್ಟರ್ ಕುಮಾರ್, ಕಾನ್ಸ್‍ಟೆಬಲ್ ಬಸವರಾಜ್ ಮತ್ತು ಸಿಬ್ಬಂದಿ ವರ್ಗ ಕಾರ್ಯಾಚರಣೆ ಕೈಗೊಂಡಾಗ ಆರೋಪಿ ಮುನಿರಾಜ ಕೂಲಿ ನಗರದ ಪಕ್ಕದಲ್ಲಿರುವ ಬುದ್ಧ ನಗರದಲ್ಲಿರುವುದನ್ನು ಖಚಿತಪಡಿಸಿಕೊಂಡಿದೆ.
ಈ ಮಾಹಿತಿ ಆಧಾರದ ಮೇಲೆ ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ಈ ತಂಡ ಬಂಧಿಸಲು ಹೋದಾಗ ಆರೋಪಿ ಮುನಿರಾಜ ಕಾನ್ಸ್‍ಟೆಬಲ್ ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಇನ್ಸ್‍ಪೆಕ್ಟರ್ ಲೋಹಿತ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರೂ ಕೂಡ ಆರೋಪಿ ಪೊಲೀಸರ ಮೇಲೆ ಮತ್ತೆ ಹಲ್ಲೆಗೆ ಮುಂದಾಗಿದ್ದಾನೆ.