ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದ್ದಂತೆ, ಪ್ರತಿಯೊಂದು ಉದ್ಯಮಗಳಲ್ಲೂ ಹೊಸ ಟೆಕ್ನಾಲಾಜಿಗಳ ಅಳವಡಿಕೆ ಆಗುತ್ತಿದೆ. ಈಗ ಟೀ ಸ್ಟಾಲ್ ಗಳಲ್ಲೂ ಮುಖಚಹರೆಯ ತಂತ್ರಜ್ಞಾನ ಬಂದಿದೆ. ಅಷ್ಟೇ ಅಲ್ಲ ಇಂತಹ ಟೆಕ್ನಾಲಾಜಿಗಳನ್ನು ಈಗ ವಿದೇಶಗಳಲ್ಲಿ ಮಾತ್ರ ಅಲ್ಲ ನಮ್ಮ ದೇಶಗಳಲ್ಲಿಯೂ ಕಾಣಬಹುದು. ಅದೂ ನಮ್ಮ ಬೆಂಗಳೂರಿನ ಟೀ ಸ್ಟಾಲ್ ನಲ್ಲಿ ನೋಡಬಹುದು.ಹೌದು. ಈಗ ಬೆಂಗಳೂರಿನ ಇಂದಿರಾನಗರದ ಪ್ರಸಿದ್ಧ ಟೀ ಸೆಂಟರ್ ಮುಖಚಹರೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಚಯ್ಯಾಸ್ ಗೆ ಒಂದು ಕಪ್ ಚಹಾ ಕುಡಿಯಲು ಹೋದರೂ ಅಲ್ಲಿ ಮುಖಚಹರೆಯ ಫೋಟೋ ತೆಗೆಯುತ್ತದೆ. ಆದರೆ ಈಗ ತಾನೆ ಬೆಂಗಳೂರಿನಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಅದರ ಪರ-ವಿರೋಧ ಚರ್ಚೆಗಳು ಕೂಡಾ ಪ್ರಾರಂಭವಾಗಿದೆ.ಚಯ್ಯಾಸ್ ಟೀ ಸೆಂಟರ್ ನಲ್ಲಿ ಅಳವಡಿಸಿರುವ ಹೊಸ ತಂತ್ರಜ್ಞಾನದ ನಮ್ಮ ಮುಖಚಹರೆಯನ್ನು ತೆಗೆಯುವುದರ ಬಗ್ಗೆ ಒಬ್ಬ ಕಾಲೇಜು ವಿದ್ಯಾರ್ಥಿನಿ ಕಾವ್ಯ ತಕರಾರು ಎತ್ತಿದ್ಧಾರೆ. ಒಂದು ಕಪ್ ಚಹಾಕ್ಕಾಗಿ ಮುಖಚಹರೆ ಫೋಟೋ ತೆಗೆಯುವುದು ಸರಿಯಲ್ಲ. ಇದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೇ ವಕೀಲ ಧನಂಜಯ್ ಕೆ.ವಿ ಅವರು ಹೇಳುವಂತೆ ಇದು ನಿಯಮ ಬಾಹಿರ. ಬಿಬಿಎಂಪಿಯಿಂದ ಪರವಾನಗಿ ಪಡೆದ ಟೀ ಸೆಂಟರ್ ನಲ್ಲಿ ಫೋಟೋ ತೆಗೆಯುವುದು ನಿಯಮ ಬಾಹಿರ. ಹೀಗಾಗಿ ಬಿಬಿಎಂಪಿ ಟೀ ಸೆಂಟರ್ ಗೆ ನೀಡಿರುವ ಪರವಾನಗಿಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದಿದ್ಧಾರೆ.ಆದ್ರೆ ಇದಕ್ಕೆ ಪ್ರತಿಕ್ರಿಯಿಸಿದ ಚಯ್ಯಾಸ್ ಸಿಬ್ಬಂದಿ, ಇದು ಗ್ರಾಹಕ ಸ್ನೇಹಿ ತಂತ್ರಜ್ಞಾನ. ಇಲ್ಲಿರುವ ದತ್ತಾಂಶವನ್ನು ಚಯ್ಯಾಸ್ ಸಿಬ್ಬಂದಿಗಾಗಲೀ, ಸಾರ್ವಜನಿಕರಿಗಾಗಲೀ ನೀಡುವುದಿಲ್ಲ. ಅಷ್ಟೇ ಅಲ್ಲ ನಮ್ಮ ಟೀ ಸೆಂಟರ್ ಗೆ ನಾಲ್ಕು ಅಥವಾ ಐದನೇ ಬಾರಿ ಟೀ ಕುಡಿಯಲು ಬರುವವರಿಗೆ ರಿಯಾಯಿತಿ ನೀಡಲಾಗುತ್ತದೆ. ಈ ತಂತ್ರಜ್ಞಾನದ ಮೂಲಕ ಗ್ರಾಹಕರು ಎಷ್ಟನೇ ಬಾರಿ ಬಂದಿದ್ದಾರೆ ಅಂತ ದತ್ತಾಂಶಗಳ ಮೂಲಕ ಪತ್ತೆ ಹಚ್ಚಿ ಅವರಿಗೆ ರಿಯಾಯಿತಿ ನೀಡುತ್ತೇವೆ. ಹಾಗೆಯೇ ರಿಯಾಯಿತಿ ಮಾಹಿತಿಯನ್ನು ಗ್ರಾಹಕರ ಮೊಬೈಲ್ ಗೆ ಕಳುಹಿಸಲಾಗುತ್ತೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನು ಗ್ರಾಹಕರಿಗೆ ರಿಯಾಯಿತಿ ನೀಡಲು ಮಾತ್ರ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.