ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 7.50ಕ್ಕೆ ನವದೆಹಲಿಯಿಂದ ಹೊರಟು, ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್ ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಅಲ್ಲಿ ಇಂದೇ ಹೆಲಿಕಾಪ್ಟರ್ ಮೂಲಕ 10.55ಕ್ಕೆ ಮೇಖ್ರಿ ಸರ್ಕಲ್‌ನ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಲ್ಯಾಂಡ್ ಆಗುವ ಪ್ರಧಾನಿ, ನಂತರ ರಸ್ತೆ ಮಾರ್ಗವಾಗಿ ಕೆಎಸ್‌ಆರ್ ರೈಲ್ವೇ ನಿಲ್ದಾಣಕ್ಕೆ ತೆರಳಲಿದ್ದಾರೆ.
ಮಾರ್ಗ ಮಧ್ಯೆ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿಗೆ ಭರ್ಜರಿ ಸ್ವಾಗತ ನೀಡಲಿದ್ದಾರೆ.
ಬೆಳಗ್ಗೆ 11.15 ರಿಂದ 11.20ರ ನಡುವೆ ಕೆಎಸ್‌ಆರ್ ರೈಲ್ವೇ ನಿಲ್ದಾಣದಲ್ಲಿ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಿ, 11.25ಕ್ಕೆ ಅಲ್ಲಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ತೆರಳಲಿದ್ದಾರೆ. ಮಾರ್ಗ ಮಧ್ಯೆ ಸೌತ್ ಎಂಡ್ ವೃತ್ತ ಹಾಗೂ ರಾಗಿಗುಡ್ಡದ ಬಳಿ ಕೂಡ ಬಿಜೆಪಿ ಕಾರ್ಯಕರ್ತರ ಸ್ವಾಗತ ವ್ಯವಸ್ಥೆ ಇದೆ.
11.45ಕ್ಕೆ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿ ಹಳದಿ ಮಾರ್ಗ ಮೆಟ್ರೋ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವರು.
ಮಧ್ಯಾಹ್ನ 12.55ಕ್ಕೆ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣಕ್ಕೆ ಆಗಮಿಸಿ, 1 ಗಂಟೆಯಿಂದ 2 ಗಂಟೆಯವರೆಗೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ ಉದ್ಘಾಟನೆ ಹಾಗೂ ಮೆಟ್ರೋ 3ನೇ ಹಂತದ ಶಂಕುಸ್ಥಾಪನೆ ನೆರವೇರಲಿದೆ.
ಕಾರ್ಯಕ್ರಮದ ಬಳಿಕ, ಮಧ್ಯಾಹ್ನ 2.20ಕ್ಕೆ ಹೆಲಿಕಾಪ್ಟರ್ ಮೂಲಕ ಹೆಚ್‌ಎಎಲ್ ಏರ್‌ಪೋರ್ಟ್‌ಗೆ ಮರಳುವ ಪ್ರಧಾನಿ, 2.40ಕ್ಕೆ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.