ಬೆನ್ನು ನೋವು ಪರಿಗಣಿಸಿ ಜಾಮೀನು ಕೊಡಿ: ಹೈಕೋರ್ಟ್ ನಲ್ಲಿ ದರ್ಶನ್ ಪರ ನಾಗೇಶ್ ವಾದ!
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬೆನ್ನು ನೋವು ಪರಿಗಣಿಸಿ ಜಾಮೀನು ಕೊಡುವಂತೆ ಹೈಕೋರ್ಟ್ ನಲ್ಲಿ ದರ್ಶನ್ ಪರ ನಾಗೇಶ್ ವಾದ ಮಾಡಿದ್ದಾರೆ.
ಬೆಂಗಳೂರಿನ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಗಿದೆ. ಈಗಾಗಲೇ ದಸರಾ ವೇಳೆ ಜಾಮೀನು ಸಿಗದೇ ನಿರಾಶೆಗೊಂಡಿದ್ದ ದರ್ಶನ್ ಈಗ ದೀಪಾವಳಿಗೂ ಹೊರ ಬರಲು ಅವಕಾಶ ದೊರಕಬಹುದೇ ಎನ್ನುವ ನಿರೀಕ್ಷೆಯಲ್ಲಿ ದಿನ ಕಳೆಯುವಂತಾಗಿದೆ.
ಕಳೆದ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನ ಭೀಕರ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾಗೌಡ, ದರ್ಶನ್ ಸಹಿತ ಹದಿನೇಳು ಮಂದಿಯನ್ನು ಬಂಧಿಸಲಾಗಿತ್ತು. ಪವಿತ್ರಾ ಗೌಡ ಮೊದಲ ಆರೋಪಿಯಾದರೆ, ದರ್ಶನ್ ಎರಡನೇ ಆರೋಪಿ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅವರನ್ನು ತಿಂಗಳ ಹಿಂದೆಯಷ್ಟೇ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಈಗಾಗಲೇ ಆರೋಗ್ಯದ ನೆಪವೊಡ್ಡಿ ಜಾಮೀನು ಅರ್ಜಿಯನ್ನು ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದಾರೆ. ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ನಂತರ ದರ್ಶನ್ ಪರ ವಕೀಲರಾಗಿರುವ ಸಿ.ವಿ.ನಾಗೇಶ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.
ದರ್ಶನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಕೈಗೆತ್ತಿಕೊಂಡರು. ಜಾಮೀನು ನೀಡಲು ಕಾರಣ ಏನು ಎನ್ನುವ ವಾದ ಮಂಡಿಸುವಂತೆ ಸಿ.ವಿ.ನಾಗೇಶ್ ಅವರಿಗೆ ಸೂಚಿಸಿದರು.
ದರ್ಶನ್ ಅವರ ಆರೋಗ್ಯ ಚೆನ್ನಾಗಿಲ್ಲ. ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದಾರೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿದಿದೆ. ಎಂಆರ್ ಐ ಸ್ಕ್ಯಾನ್ ವರದಿ ಪ್ರಕಾರ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವೂ ಇದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬೇಕು. ಆರೋಗ್ಯದ ಸ್ಥಿತಿಯನ್ನು ಪರಿಗಣಿಸಬೇಕು ಎಂದು ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ಮನವಿ ಮಾಡಿದರು.
ದರ್ಶನ್ ಅವರ ಆರೋಗ್ಯದ ಕುರಿತಾಗಿ ವೈದ್ಯರ ವರದಿಗಳು, ತಪಾಸಣೆಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದರು.