ಬೆಳಗ್ಗೆ ಹೀಗೆ ಮಾಡಿದರೆ ಲಕ್ಷ್ಮೀದೇವಿ ಕೃಪೆ ಸದಾ ನಿಮ್ಮ ಮನೆಯಲ್ಲೇ ಇರುತ್ತಾಳೆ!
ಬೆಳಗಿನ ಸಮಯವನ್ನು ಶ್ರೇಷ್ಠ ಸಮಯ ಎಂದು ಎಲ್ಲ ಧರ್ಮಗ್ರಂಥಗಳಲ್ಲಿಯೂ ಹೇಳಲಾಗಿದೆ. ಬೆಳಗ್ಗೆ ಎದ್ದು ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಸಂಪತ್ತಿನ ಅಧಿದೇವತೆಯಾದ ಶ್ರೀಲಕ್ಷ್ಮೀದೇವಿಯ ಕೃಪೆ ದೊರೆಯುತ್ತದೆ ಎಂದು ನಂಬಲಾಗಿದೆ.
ಧಾರ್ಮಿಕ ನಂಬಿಕೆಯ ಪ್ರಕಾರ, ನಿದ್ರೆಯಿಂದ ಎದ್ದ ಕೂಡಲೇ ಕಣ್ಣು ತೆರೆಯುವ ಮುನ್ನ ದಿನ ಪೂರ್ತಿ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡಿಸಿಕೊಳ್ಳಬೇಕು. ನಂತರ ಕಣ್ಣು ತೆರೆಯುತ್ತಾ ಎರಡು ಕೈಗಳನ್ನು ಜೋಡಿಸಿ ದೇವರನ್ನು ಸ್ಮರಿಸುವುದು ಶುಭಕರ ಎಂದು ಋಷಿ-ಮುನಿಗಳು ಹೇಳಿದ್ದಾರೆ.
ಹಾಸಿಗೆಯಿಂದ ಎದ್ದು ಬರುವಾಗಲೂ ಕೆಲವು ನಿಯಮಗಳನ್ನು ಪಾಲಿಸಬೇಕು. ಯಾವ ದಿಕ್ಕಿನಿಂದ ಶಬ್ದ ಕೇಳಿಬರುತ್ತಿದೆಯೋ ಆ ದಿಕ್ಕಿನಿಂದಲೇ ಎದ್ದು ನಿಲ್ಲುವುದು, ನಂತರ ಒಂದು ಗಂಟೆ ಕಾಲ ಮೌನವಾಗಿರುವುದು ಶ್ರೇಷ್ಠ ಎಂದು ನಂಬಿಕೆ.
ಮುಂಜಾನೆ ಕೈಕಾಲು ತೊಳೆದು ದೇವರ ಪ್ರಾರ್ಥನೆ, ಮಂತ್ರಜಪ ಮತ್ತು ಧ್ಯಾನ ಮಾಡಿದರೆ ನಕಾರಾತ್ಮಕ ಚಿಂತನೆಗಳು ದೂರವಾಗಿ, ಮನಸ್ಸು ಶಾಂತವಾಗುತ್ತದೆ. ಪ್ರಾರ್ಥನೆ ಬಳಿಕ ಯೋಗ, ನಡಿಗೆ ಅಥವಾ ವ್ಯಾಯಾಮ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯಕ.
ಬೆಳಿಗ್ಗೆ ನಕಾರಾತ್ಮಕ ವಿಚಾರ, ಕೆಟ್ಟ ಸುದ್ದಿ ಅಥವಾ ಅಶುಭ ಮಾತುಗಳಿಂದ ದಿನವನ್ನು ಆರಂಭಿಸಬಾರದು ಎಂದು ಪಂಡಿತರು ಸಲಹೆ ನೀಡಿದ್ದಾರೆ.
ಅಂತೆಯೇ, ಆರೋಗ್ಯಕರ ಆಹಾರ ಸೇವನೆ ಕೂಡ ಮುಖ್ಯ. ಶುದ್ಧ ಆಹಾರ ಸೇವಿಸಿದರೆ ದೇಹ, ಮನಸ್ಸು ಹಾಗೂ ಆತ್ಮದಲ್ಲಿ ಶುದ್ಧತೆ ಮೂಡುತ್ತದೆ. ಇಂತಹ ಜೀವನಶೈಲಿಯಿಂದ ಶ್ರೀಲಕ್ಷ್ಮಿಯ ಆಶೀರ್ವಾದ ದೊರೆತು ದಿನ ಪೂರ್ತಿ ಸಂತೋಷದಿಂದ ಕಳೆಯಬಹುದು ಎಂದು ಧಾರ್ಮಿಕ ತಜ್ಞರು ಹೇಳಿದ್ದಾರೆ.






