ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಶಾಕ್: ರಾಜ್ಯಾದ್ಯಂತ ಲೋಕಾಯುಕ್ತ ದಾಳಿ
ಬೆಂಗಳೂರು: ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಧಿಕಾರಿಗಳು ನಿದ್ರೆಯಿಂದ ಏಳುವ ಮೊದಲೇ ದಾಳಿ ನಡೆದಿದೆ. ಹೌದು ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಂಸಿ ಕೃಷ್ಣವೇಣಿ ಮನೆ ಮೇಲೆ ದಾಳಿ ನಡೆದಿದೆ. ಸದ್ಯ ಕೃಷ್ಣವೇಣಿ ಮಂಗಳೂರಿಗೆ ವರ್ಗವಾಗಿದ್ದು, ಅಲ್ಲಿಯೂ ಅವರ ಮನೆ ಮೇಲೆ ದಾಳಿ ನಡೆದಿದೆ. ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಎಸ್ಪಿ ಮೋಹನ್ ಮನೆ ಮೇಲೆಯೂ ರೇಡ್ ನಡೆದಿದೆ. ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್, ಸಂಬಂಧಿಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಹೇಶ್ ಮನೆ, ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿದೆ. ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.