ಹೆಣ್ಣುಮಕ್ಕಳು ಪುರುಷರಿಗಿಂತ ಯಾವ ವಿಷಯದಲ್ಲು ಕಡಿಮೆ ಇಲ್ಲ ಎಂದು ಪ್ರೂವ್ ಆಗಿದೆ. ಪುರುಷರಂತೆಯೇ ಮಹಿಳಾ ಮಣಿಗಳು ತಮ್ಮದೇ ಒಂದು ತಂಡ ಕಟ್ಟಿಕೊಂಡು ಸಾಹಸಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ. ಅದು ಇಲ್ಲೆ, ಎಲ್ಲೊ ಅಕ್ಕಪಕ್ಕದ ಪ್ರವಾಸಿತಾಣಗಳಿಗಲ್ಲ. ಬದಲಾಗಿ ದೂರದ ಹಿಮಾಲಯಕ್ಕೆ. ಅದೂ ಬೈಕ್ನಲ್ಲಿ..!
ಇವರು ಸಾರಾ ಕಶ್ಯಪ್. ಚಂಡೀಗಢ ಮೂಲದವರು. ಪ್ರತಿ ವರ್ಷ ನಡೆಯುವ ರೈಡ್ ಟು ಹಿಮಾಲಯ ಎಂಬ ಬೈಕ್ ರೈಡಿಂಗ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ.
ಕಳೆದ ವರ್ಷದ ರೈಡ್ ದಿ ಹಿಮಾಲಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ಸ್ಪರ್ಧಿ ಸಾರಾ ಆಗಿದ್ದರು. ಬೈಕ್ ಓಡಿಸುವಾಗ ಬಿದ್ದು ಕಾಲರ್ ಬೋನ್ ಮುರಿದುಕೊಂಡಿದ್ದರೂ ಸಹ ಅರ್ಧಕ್ಕೇ ನಿಲ್ಲಿಸದೇ, ಸ್ಪರ್ಧೆ ಪೂರ್ಣಗೊಳಿಸಿದ ಗಟ್ಟಿಗಿತ್ತಿ ಈ ಸಾರಾ.
ಸಾರಾ ಕೆಲಸದಿಂದ 15 ದಿನಗಳ ರಜೆ ಪಡೆದು ಬಂದು ಪ್ರಪಂಚದ ಅತಿ ಎತ್ತರದಲ್ಲಿ ಜರುಗುವ ಈ ಮೋಟರ್ಸ್ಪೋರ್ಟ್ಸ್ನಲ್ಲಿ ಪಾಲ್ಗೊಂಡಿದ್ದರು. ಡಕಾರ್ ನಂತರದ ಎರಡನೇ ಅತಿ ಕಠಿಣ ರ್ಯಾಲಿ ಎಂಬ ಕುಖ್ಯಾತಿ ರೈಡ್ ದಿ ಹಿಮಾಲಯಗೆ ಸಲ್ಲುತ್ತದೆ. ಆದರೆ ಅದಕ್ಕೆ ಜಗ್ಗದ ಕೇವಲ 5 ಅಡಿ, 1 ಇಂಚು ಎತ್ತರದ, 51 ಕೆಜಿ ತೂಕದ ಸಾರಾ 180 ಕಿಲೋ ತೂಕದ ಬುಲೆಟ್ ಬೈಕ್ಅನ್ನು ಓಡಿಸಿಕೊಂಡು ಸ್ಪರ್ಧೆಯನ್ನು ಪೂರ್ಣಗೊಳಿಸಿದರು.
2015ರ ಈ ರ್ಯಾಲಿಯಲ್ಲಿ ಬರೊಬ್ಬರಿ 147 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಪಯಣ ಪೂರ್ಣಗೊಳಿಸಿದ್ದು ಕೇವಲ 40 ಸ್ಪರ್ಧಿಗಳಷ್ಟೇ. ಅವರಲ್ಲಿ ಏಕೈಕ ಮಹಿಳೆ ಸಾರಾ ಕೂಡ ಒಬ್ಬರು ಎಂಬುದೇ ವಿಶೇಷ. 16ನೇ ವಯಸ್ಸಿನಿಂದಲೇ ಬೈಕ್ಗೆ ಅಂಟಿಕೊಂಡಿರುವ ಸಾರಾ ಅವರಿಗೆ ಈಗ 32 ವರ್ಷ ವಯಸ್ಸು.
ಈ ಹಿಂದೆ ಕರ್ನಾಟಕದಿಂದ ಖಾರ್ದುಂಗ್ಲಾವರೆಗೂ ಬರೊಬ್ಬರಿ 6 ಸಾವಿರ ಕಿಲೋಮೀಟರ್ ಬೈಕ್ ಪಯಣವನ್ನು ಏಕಾಂಗಿಯಾಗಿ ಕ್ರಮಿಸಿದ್ದರು ಸಾರಾ. ಆ ಬಳಿಕ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಒಡಿಸಿ ಅಡಿಯಲ್ಲಿ ದೆಹಲಿಯಿಂದ ಲಡಾಖ್ಗೆ 70 ಜನರ ತಂಡವನ್ನು ಕರೆದೊಯ್ದಿದ್ದರು. 15 ದಿನಗಳ ಈ ಪಯಣದಲ್ಲಿ ಸುಮಾರು 3ಸಾವಿರ ಕಿಲೋಮೀಟರ್ ಕ್ರಮಿಸಲಾಗಿತ್ತು.
ವಿಶೇಷ ಅಂದರೆ ಈಗ ತಮ್ಮಂತೆಯೇ ಬೈಕ್ ಕ್ರೇಜ್ ಇರುವ ಕೆಲ ಸಮಾನ ಮನಸ್ಕ ಮಹಿಳೆಯರ ತಂಡ ಮಾಡಿಕೊಂಡಿರುವ ಸಾರಾ ಇದೇ ಮೊದಲ ಬಾರಿಗೆ ಹಿಮಾಲಯಕ್ಕೆ ಸಂಪೂರ್ಣ ಮಹಿಳಾ ತಂಡವನ್ನು ಕರೆದುಕೊಂಡು ಹೋಗುತ್ತಿದ್ದಾರೆ.
15ನೇ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಒಡಿಸಿಯ ಭಾಗವಾಗಿ ಈ ಮಹಿಳಾಮಣಿಗಳ ತಂಡವನ್ನು ಸಿದ್ಧಪಡಿಸಿದ್ದರು ಸಾರಾ. ಕಳೆದ ಜುಲೈ 6ರಂದು ದೆಹಲಿಯಿಂದ ಹೊರಟ 20 ಮಹಿಳೆಯರ ಈ ತಂಡ, 17 ದಿನಗಳಲ್ಲಿ ಸುಮಾರು 2 ಸಾವಿರದ 200 ಕಿಲೋಮೀಟರ್ ಅಂತರವನ್ನು ಬೈಕ್ನಲ್ಲಿ ಕ್ರಮಿಸಿ ಜುಲೈ 23ರಂದು ಹಿಮಾಲಯ ತಲುಪಿತ್ತು.
ದೆಹಲಿಯಿಂದ ಹೊರಟ ಈ ಟೀಮ್ ನಲ್ಲಿ ಕಳೆದ 14 ವರ್ಷಗಳಿಂದ ಬೈಕ್ ಓಡಿಸುತ್ತಿರುವ ಪುಣೆ ಮೂಲದ ಊರ್ವಶಿ ಪಟೋಲೆ ಮತ್ತಿತರರಿದ್ದರು. ಈ ಮಹಿಳಾ ರೈಡರ್ಗಳ ಜೊತೆಯಲ್ಲೆ ಕೆಲ ಬೈಕ್ ತಂತ್ರಜ್ಞರು, ವೈದ್ಯರು ಹಾಗೂ ಇತರೆ ಸಿಬ್ಬಂದಿ ಕೂಡ ಪ್ರತ್ಯೇಕ ವಾಹನದಲ್ಲಿ ಸಂಚರಿಸಿದ್ದರು. ಅವರೆಲ್ಲರೂ ಕೂಡ ಮಹಿಳೆಯರೇ ಎಂಬುದು ಮತ್ತೊಂದು ವಿಶೇಷ.
ಒಟ್ಟಿನಲ್ಲಿ ಸಾಧಿಸುವ ಮನಸ್ಸಿದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಸಾರಾ ಮತ್ತು ಅವರ ತಂಡದ ಸಾಧನೆಗಳೇ ಸಾಕ್ಷಿ.