ಇವರು ಶಂದ್ ಪನೇಸರ್. ಭಾರತೀಯ ಮೂಲದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಅಧಿಕಾರಿ. ಇವರು ರಿಯಲ್ ಹೀರೋ. ಹೊತ್ತಿ ಉರಿಯುತ್ತಿದ್ದ ಮನೆಯೊಂದರಲ್ಲಿ ಸಿಕ್ಕಿದ ಇಡೀ ಕುಟುಂಬವನ್ನು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ ದಕ್ಷ, ಧೈರ್ಯವಂತ ಮತ್ತು ಸಾಹಸಿ. ಈ ಮೂಲಕ ಸಾವಿರಾರು ಲಂಡನ್ ಪ್ರಜೆಗಳ ಮನಸ್ಸನ್ನೂ ಗೆದ್ದಿದ್ದಾರೆ.
ಬ್ರಿಟಿಷ್ ಪೊಲೀಸ್ ಅಧಿಕಾರಿಯಾಗಿರೋ ಶಂದ್ ಪನೇಸರ್ ಅವರಿಗೆ ಶೌರ್ಯ ಪ್ರಶಸ್ತಿ ಒಲಿದಿದೆ. ಸಹಪಾಠಿ ಕ್ರೇಗ್ ನಿಕೋಲ್ಸನ್ ಅವರೊಂದಿಗೆ ಶಂದ್ ಪನೇಸರ್ ಕೂಡ ‘ಔಟ್ ಸ್ಟ್ಯಾಂಡಿಂಗ್ ಬ್ರೇವರಿ ಆಫ್ ದಿ ಇಯರ್ ಎಟ್ ದಿ ಟೋಟಲ್ ಎಕ್ಸಲೆನ್ಸ್ ಇನ್ ಪೊಲೀಸಿಂಗ್ ಅವಾರ್ಡ್ಸ್’ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ವರ್ಷ ಪನೇಸರ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯ್ತು. ವಿಶೇಷ ಅಂದ್ರೆ ಈ ಪ್ರಶಸ್ತಿಗಾಗಿ ಶಂದ್ ಪನೇಸರ್ ಅವರನ್ನು ಲಂಡನ್ ನ ಪೊಲೀಸ್ ಇಲಾಖೆ ಅಥವಾ ಸರ್ಕಾರ ಆಯ್ಕೆ ಮಾಡಿಲ್ಲ. ಶೌರ್ಯ ಪ್ರಶಸ್ತಿಗೆ ಪನೇಸರ್ ಅರ್ಹರು ಅಂತಾ ಸಾರ್ವಜನಿಕರೇ ಆಯ್ಕೆ ಮಾಡಿದ್ದಾರೆ. ಪನೇಸರ್ ಅವರ ಪರ ಮತ ಹಾಕಿದ್ದಾರೆ.
ನೋಡಿ, 2016ರ ಸೆಪ್ಟೆಂಬರ್ ನಲ್ಲಿ ಹಿಲ್ಲಿಂಗ್ಟನ್ ನಲ್ಲಿರುವ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಮನೆಯೊಳಕ್ಕೆ ಇಬ್ಬರು ಸಿಲುಕಿಕೊಂಡಿದ್ರು. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಪೊಲೀಸ್ ಅಧಿಕಾರಿಗಳಾದ ಶಂದ್ ಪನೇಸರ್ ಮತ್ತು ಕ್ರೇಗ್ ನಿಕೋಲ್ಸನ್ ಅಲ್ಲಿಗೆ ಹಾಜರಾಗಿದ್ರು. ಅವರ ಬಳಿ ಬೆಂಕಿ ತಡೆಯುವ ಯಾವುದೇ ಉಪಕರಣವಾಗ್ಲಿ, ಅಗ್ನಿ ನಿರೋಧಕ ಬಟ್ಟೆಗಳಾಗ್ಲಿ ಇರಲಿಲ್ಲ.
ಆದ್ರೂ ನೋಡಿ, ಪೊಲೀಸ್ ಅಧಿಕಾರಿಗಳಾದ ಶಂದ್ ಪನೇಸರ್ ಹಾಗೂ ಕ್ರೇಗ್ ನಿಕೋಲ್ಸನ್ ಯಾವುದೇ ಹಿಂಜರಿಕೆ ಅಥವಾ ಪ್ರಾಣಭಯವಿಲ್ಲದೆ ಜೀವದ ಹಂಗು ತೊರೆದು ಬೆಂಕಿಯ ನಡುವೆಯೇ ಮನೆಯೊಳಕ್ಕೆ ಪ್ರವೇಶಿಸಿ, ಅಲ್ಲಿ ಸಿಲುಕಿಕೊಂಡಿದ್ದರ ಪೈಕಿ ಮೊದಲು ಇಬ್ಬರನ್ನು ರಕ್ಷಣೆ ಮಾಡಿದ್ರು.
ಇನ್ನು ಮನೆಯ ತುಂಬೆಲ್ಲಾ ದಟ್ಟವಾದ ಹೊಗೆ ಆವರಿಸಿತ್ತು, ಎಲ್ಲಿ ನೋಡಿದ್ರೂ ಅಗ್ನಿಯ ಕೆನ್ನಾಲಗೆ ಚಾಚುತ್ತಿತ್ತು. ಒಳಗಡೆ ಸಿಲುಕಿಕೊಂಡಿರುವವರು ಹೊರಬರುವುದು ನಿಜಕ್ಕೂ ಕಷ್ಟಕರ ಅನ್ನೋದು ಈ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿತ್ತು. ಹೊಗೆಯಿಂದ ಪಾರಾಗಲು ತಾವು ಧರಿಸಿದ್ದ ಸಮವಸ್ತ್ರವನ್ನೇ ಮುಖಕ್ಕೆ ಕಟ್ಟಿಕೊಂಡ ಅಧಿಕಾರಿಗಳು ಕತ್ತಲಲ್ಲೇ ಒಳನುಗ್ಗಿ ಇಡೀ ಕುಟುಂಬವನ್ನು ಬೆಂಕಿಯಿಂದ ಪಾರು ಮಾಡಿದ್ರು.
ಅತಂಕ ಎಂದರೆ, ಬೆಂಕಿಯಲ್ಲಿ ಸಿಲುಕಿದ್ದ ಕುಟುಂಬವನ್ನೇನು ಪಾರು ಮಾಡಿದ್ರು. ಆದರೆ, ಅವರು ಬೆಂಕಿಯಲ್ಲಿ ಸಿಲುಕಿದ್ರು, ಆದರೂ ಎದೆಗುಂದದೆ, ಆ ಇಬ್ಬರು ಪೊಲೀಸ್ ಅಧಿಕಾರಿಗಳು ಧೈರ್ಯ ಮತ್ತು ಸಾಹಸದಿಂದಾಗಿ ಪಾರಾಗಿ ಬಂದ್ರು. ಮತ್ತೆ ಇಡೀ ಕುಟುಂಬವನ್ನು ರಕ್ಷಿಸಿ ಜನರಿಂದ ಶಭಾಷ್ ಗಿರಿ ಪಡೆದ್ರು.
ಪೊಲೀಸ್ ಅಧಿಕಾರಿಗಳಾದ ಶಂದ್ ಪನೇಸರ್ , ಸಾರ್ವಜನಿಕರ ರಕ್ಷಣೆ, ಅಪರಾಧಿಗಳೊಂದಿಗೆ ಸೆಣಸಾಟ ಹೀಗೆ ಅಪಾಯಕಾರಿ ಕೆಲಸವನ್ನು ನಿರ್ವಹಿಸಿ ಯಶಸ್ವಿ ಪೊಲೀಸ್ ಅಧಿಕಾರಿಯೆಂದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಲಂಡನ್ ನಗರ ಹಾಗೂ ಜನತೆಯನ್ನು ರಕ್ಷಿಸಲು ಇವರು ಮಾಡ್ತಾ ಇರೋ ಕಾರ್ಯ ಶ್ಲಾಘನೀಯ.
ಒಟ್ಟಿನಲ್ಲಿ ಭಾರತೀಯ ಮೂಲದ ಬ್ರಿಟನ್ ಪೊಲೀಸ್ ಅಧಿಕಾರಿ ಶಂದ್ ಪನೇಸರ್ ಅವರು ದಕ್ಷತೆ ಹಾಗೂ ಸಾಹಸದಿಂದ ನಿರ್ವಹಿಸುತ್ತಿರುವ ಕಾರ್ಯ ನಿಜಕ್ಕೂ ಅವರನ್ನು ದೊಡ್ಡ ಹೀರೋ ಮಾಡಿದೆ. ಇತರರಿಗೂ ಮಾದರಿಯಾಗಿದೆ.