ಅತ್ಯಾಚಾರದ ಅವಮಾನವನ್ನ ಮೆಟ್ಟಿ ನಿಂತು ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಧೀರ ಮಹಿಳೆ. ದೇಶದಲ್ಲಿಂದು ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ ಜಾರಿಯಾಗುವಂತೆ ಮಾಡಿದ ಸಾಹಸಗಾರ್ತಿಯೂ ಹೌದು. ಈ ಮಹಾನ್ ಮಹಿಳೆಯ ಹೆಸರು ಭನ್ವಾರಿದೇವಿ.
ಗುಜ್ಜರ್ ಸಮುದಾಯದ ದಬ್ಬಾಳಿಕೆ ಮಿತಿ ಮೀರಿರುವ ರಾಜಸ್ಥಾನದಲ್ಲಿ ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತುತ್ತಿರುವ ಗಟ್ಟಿಗಿತ್ತಿ. ರಾಜಸ್ಥಾನದ ರಾಜಧಾನಿ ಜೈಪುರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಭಟೆರಿ ಎಂಬ ಗ್ರಾಮದವರು. ಇವರದು ಪಾಟರ್ ಸಮುದಾಯಕ್ಕೆ ಸೇರಿದ ಕುಟುಂಬ. ಕಸುಬು ಕೃಷಿ. ಪತಿ ಮೋಹನ್ ಲಾಲ್ ಪ್ರಜಾಪತ್.
1990ರ ದಶಕದಲ್ಲೇ ರಾಜಸ್ಥಾನ ಸರ್ಕಾರದ ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ ಸಾತಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾತಿನ್ ಅಂದ್ರೆ, ಗ್ರಾಮಗಳಲ್ಲಿ ಪ್ರತಿ ಮನೆಯ ಬಾಗಿಲಿಗೆ ಹೋಗಿ ಸಾಮಾಜಿಕ ಪಿಡುಗುಗಳು ವಿರುದ್ಧ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ.ಹೆಣ್ಣುಭ್ರೂಣ ಹತ್ಯೆ ತಡೆ, ವರದಕ್ಷಿಣೆ ತಡೆ ಹಾಗೂ ಬಾಲ್ಯವಿವಾಹ ಹೀಗೆ ಹಲವು ವಿಷಯಗಳ ಬಗ್ಗೆ ಭನ್ವಾರಿದೇವಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದರು.
ಈ ನಡುವೆಯೇ ಸ್ವತ: ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಭನ್ವಾರಿದೇವಿ ಅತ್ಯಾಚಾರಕ್ಕೆ ತುತ್ತಾಗಿದ್ದು ದೊಡ್ಡ ನೋವಿನ ಸಂಗತಿ. ಆ ಕಹಿ ಘಟನೆ ಏನೆಂದರೆ, ಬಹುಶಃ 1992, ಸೆಪ್ಟೆಂಬರ್ 22, ಭನ್ವಾರಿದೇವಿಯಲ್ಲಿ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರಂತೆ. ಜೊತೆಯಲ್ಲೇ ಪತಿ ಮೋಹನ್ ಲಾಲ್ ಕೆಲಸ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಐವರು ದಾಂಡಿಗರು, ಮೋಹನ್ ಲಾಲ್ ಮೇಲೆ ಹಲ್ಲೆ ಮಾಡೋಕೆ ಆರಂಬಿಸಿದ್ರರಂತೆ. ತಡೆಯಲು ಹೋದ ಭನ್ವಾರಿದೇವಿಯವರ ಮೇಲೆ ಎರಗಿದರು ಆ ದುಷ್ಟರು. ಭನ್ವಾರಿ ದೇವಿಯವರು ಬಾಲ್ಯ ವಿವಾಹ ತಡೆದಿದ್ದಕ್ಕೆ ಅವರ ಮೇಲೆ ದಾಳಿಯಿಟ್ಟ ಗುಜ್ಜರ್ ಸಮುದಾಯದ ಆ ಐವರ ಪೈಕಿ ಮೂವರು ಲೈಂಗಿಕ ದೌರ್ಜನ್ಯ ನಡೆಸಿದ್ರು.
ಭನ್ವಾರಿದೇವಿಯವರು ತಮ್ಮ ಗಂಡನ ಕಣ್ಣೇದುರೇ ಸಾಮೂಹಿಕ ಅತ್ಯಾಚಾರಕ್ಕೀಡಾದರು. ಆಮೇಲೆ, ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಗ್ರಾಮದಲ್ಲಿ ನ್ಯಾಯ ಕೇಳಲು ಮುಂದಾದರಂತೆ. ಮತ್ತೆ ಪೊಲೀಸರಿಗೂ ಮೊರೆ ಹೋಗಿ ನ್ಯಾಯ ದೊರಕಿಸುವಂತೆ ಅಂಗಲಾಚಿದರಂತೆ. ಆದರೆ, ಬಲಿಷ್ಠರ ನಡುವೆ ಅಲ್ಲೂ ನ್ಯಾಯ ದೊರೆಯಲಿಲ್ಲವಂತೆ. ಆದರೂ ಎದೆಗುಂದದೆ ಭನ್ವಾರಿ ದೇವಿಯವರು ಹೋರಾಟಕ್ಕಿಳಿದ್ರು.
ಇಂದಿಗೂ ಸಹ ಎಷ್ಟೋ ಮಹಿಳೆಯರು ತಮ್ಮ ಮೇಲೆ ನಡೆಯೋ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ. ಅತ್ಯಾಚಾರಕ್ಕೆ ಒಳಗಾಗಿದ್ದರೂ ದೂರ ದಾಖಲಿಸದೆ ಸುಮ್ಮನಾಗುತ್ತಾರೆ. ಆದ್ರೆ, 25 ವರ್ಷಗಳ ಹಿಂದೆಯೇ ಭನ್ವಾರಿ ದೇವಿ ತಮ್ಮ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ಹೋರಾಟ ಮಾಡಿದರು. ಪೊಲೀಸರು ತಮ್ಮ ಪ್ರಕರಣವನ್ನ ಹಳ್ಳ ಹಿಡಿಸಿದ ಮೇಲೂ ಭನ್ವಾರಿದೇವಿಯವರು ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದರು.
ಕೊನೆಗೆ ಮಹಿಳಾ ಸಂಘಟನೆಗಳು ಸಹ ಭನ್ವಾರಿದೇವಿಯವರ ಪರ ಹೋರಾಟ ನಡೆಸಿದವು. ಈ ಎಲ್ಲ ಒತ್ತಡಗಳಿಂದ ರಾಜಸ್ಥಾನ ಸರ್ಕಾರ ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿತು. ಅತ್ಯಾಚಾರ ನಡೆದ ಒಂದು ವರ್ಷದ ಬಳಿಕ ಕೊನೆಗೂ ಐದು ಆರೋಪಿಗಳನ್ನ ಬಂಧಿಸಲಾಯಿತು. ಐವರ ವಿರುದ್ಧ ಸಾಮೂಹಿಕ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಕುತಂತ್ರ ಪ್ರಕರಣ ದಾಖಲಿಸಲಾಯಿತು. ಆದರೆ, ಮುಂದೆ ನಡೆದ ವಿಚಿತ್ರ ಬೆಳವಣಿಗೆಗಳಿಂದ 1995ರ ನವೆಂಬರ್ ನಲ್ಲಿ ಆ ಎಲ್ಲ ಆರೋಪಿಗಳು ಖುಲಾಸೆಯಾದರು.
ಮಹಿಳೆಯೊಬ್ಬರು ತಮ್ಮ ಜೀವನವನ್ನೇ ಹೋರಾಟದ ಅಸ್ತ್ರವಾಗಿಸಿಕೊಂಡು, ದೇಶದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನ ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ ಜಾರಿಯಾಗುವಂತೆ ಮಾಡಿದ ನಿಜ ಜೀವನದ ಕತೆಯ ನಾಯಕಿ ಭನ್ವಾರಿದೇವಿ. ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿ, ಮಂದ ಕಾನೂನು ವ್ಯವಸ್ಥೆಯಲ್ಲಿ ಹೋರಾಟ ಮಾಡಿದ ಹಲವು ಕಾರಣಗಳಿಗಾಗಿ ಆಧುನಿಕ ಭಾರತ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂತಹ ವ್ಯಕ್ತಿತ್ವ.