ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ 20 ಸದಸ್ಯರ ನ್ಯೂಜಿಲೆಂಡ್ ತಂಡ ಈಗಾಗಲೇ ಸೌತಾಂಪ್ಟನ್ ತಲುಪಿದ್ದು ಟೀಮ್ ಇಂಡಿಯಾ ತಂಡ ಮುಂಬೈನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದೆ.

ಈ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ನ್ಯೂಜಿಲೆಂಡ್ ತಂಡದ ಬೌಲಿಂಗ್ ತರಬೇತುದಾರ ಶೇನ್ ಜರ್ಗೆನ್ಸನ್ ಟೀಂ ಇಂಡಿಯಾ ತಂಡದ ಕುರಿತು ಮಾತನಾಡಿದ್ದಾರೆ. ಟೀಮ್ ಇಂಡಿಯಾ ಬಲಿಷ್ಠತೆ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಶೇನ್ ಜರ್ಗೆನ್ಸನ್ ರಿಷಭ್ ಪಂತ್ ಡೇಂಜರಸ್ ಆಟಗಾರ ಎಂದಿದ್ದಾರೆ.

‘ರಿಷಭ್ ಪಂತ್ ಒಬ್ಬ ಅತ್ಯದ್ಭುತ ಆಕ್ರಮಣಕಾರಿ ಆಟಗಾರ. ಯಾವ ಸಮಯದಲ್ಲಿ ಬೇಕಾದರೂ ಪಂದ್ಯದ ದಿಕ್ಕನ್ನು ಬದಲಿಸಬಲ್ಲಂತ ಸಾಮರ್ಥ್ಯವುಳ್ಳ ರಿಷಭ್ ಪಂತ್ ನಮ್ಮ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಗಳಲ್ಲಿ ರಿಷಭ್ ಪಂತ್ ಸ್ಫೋಟಕ ಆಟವನ್ನು ನೋಡಿದ್ದೇವೆ, ಅವಕಾಶ ಸಿಕ್ಕಾಗ ಆತನ ವಿಕೆಟ್ ಪಡೆಯುವುದು ಉತ್ತಮ’ ಎಂದು ಶೇನ್ ಜರ್ಗೆನ್ಸನ್ ರಿಷಭ್ ಪಂತ್ ಸ್ಫೋಟಕ ಆಟದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.






