ಭಾರತದ ಮೇಲೆ ಹೆಚ್ಚುವರಿ ಶೇ 50ರಷ್ಟು ಸುಂಕ ವಿಧಿಸಿದ ಟ್ರಂಪ್
ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಪ್ರತಿಯಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ನಿನ್ನೆ ಬೆದರಿಕೆ ನೀಡಿದ್ದಂತೆಯೇ, ಇಂದು ಭಾರತದಿಂದ ಆಗುವ ಆಮದುಗಳ ಮೇಲೆ ಹೆಚ್ಚುವರಿ ಶೇ.25ರಷ್ಟು ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಈ ಮೂಲಕ ಭಾರತದ ಮೇಲೆ ಅಮೆರಿಕ ಹಾಕಿರುವ ಒಟ್ಟು ವ್ಯಾಪಾರ ಸುಂಕ ಶೇ.50ರಷ್ಟು ಆಗಿದ್ದು, ಇದು ಎರಡೂ ದೇಶಗಳ ನಡುವೆ ಈಗಾಗಲೇ ಉದ್ವಿಗ್ನತೆಯಲ್ಲಿರುವ ಸಂಬಂಧಕ್ಕೆ ಮತ್ತಷ್ಟು ಮೂರನೆ ನೀಡುವಂತೆ ಕಾಣುತ್ತಿದೆ.
ಅಮೆರಿಕ ಅಧ್ಯಕ್ಷರ ಈ ಕಾರ್ಯಕಾರಿ ಆದೇಶ ಆಗಸ್ಟ್ 27ರಿಂದ ಜಾರಿಗೆ ಬರಲಿದ್ದು, ಅವರ ಸಹಿಯನ್ನು ಪಡೆದುಕೊಂಡಿದೆ. ಜುಲೈ 30ರಂದು ನೀಡಿದ್ದ ಎಚ್ಚರಿಕೆಯಲ್ಲಿ ಟ್ರಂಪ್ ಆಗಸ್ಟ್ 1ರಿಂದಲೇ ಈ ಸುಂಕ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು. ಭಾರತ ರಷ್ಯಾದಿಂದ ತೈಲ ಖರೀದಿ ನಿರ್ಣಯದಿಂದ ಅಮೆರಿಕ ಅಸಮಾಧಾನಗೊಂಡಿದ್ದು, ಇದೇ ಹಿನ್ನೆಲೆಯಲ್ಲಿ ಈ ತೀವ್ರ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.