ಮೊಹಮ್ಮದ್ ಇಮ್ರಾನ್, ಭಾರತೀಯ ಹಾಕಿ ಕೋಚ್ ಗಳ ಪೈಕಿ ಚಾಲ್ತಿಯಲ್ಲಿರುವ ದೊಡ್ಡ ಹೆಸರು. ಭಾರತೀಯ ತಂಡದಲ್ಲಿರುವ 8 ಆಟಗಾರ್ತಿಯರಿಗೆ ಇಮ್ರಾನ್ ಇವತ್ತಿಗೂ ಹಾಕಿ ಪಾಠ ಹೇಳಿಕೊಡುತ್ತಿದ್ದಾರೆ. ಇತ್ತೀಚೆಗೆ ಮುಗಿದಿರೋ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ತಂಡ ನೀರಸ ಪ್ರದರ್ಶನ ನೀಡಿದ್ರೂ ತಂಡದ ಉಪನಾಯಕಿ ನಿಧಿ ಕುಲ್ಲರ್ ಆಟ ಗಮನ ಸೆಳೆದಿತ್ತು. ನಿಧಿಯ ಆಟಕ್ಕೆ ಫರ್ಫೆಕ್ಷನ್ ನೀಡಿದ್ದು ಕೂಡ ಇದೇ ಇಮ್ರಾನ್.
ಈಗ ನೀವು ಅಂದುಕೊಳ್ಳಬಹುದು, ಇಮ್ರಾನ್ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರಬಹುದು ಅಂತ. ಹಾಗಂದುಕೊಂಡ್ರೆ ಅದು ದೊಡ್ಡ ತಪ್ಪು. ಭಾರತೀಯ ಹಾಕಿ ಕೋಚ್ ಇಮ್ರಾನ್ ಈಗ ಜೀವನ ಸಾಗಿಸುವುದಕ್ಕೆ ಸೈಕಲ್ನಲ್ಲಿ ಟ್ರ್ಯಾಕ್ ಸೂಟ್ಗಳನ್ನು ಮಾರುತ್ತಿದ್ದಾರೆ. ಉತ್ತರ ಪ್ರದೇಶದ ಹಳ್ಳಿಹಳ್ಳಿಯಲ್ಲಿ ಜೀವನೋಪಾಯಕ್ಕಾಗಿ ಇಮ್ರಾನ್ ಈ ಕೆಲಸ ಮಾಡುತ್ತಿದ್ದಾರೆ.
ಭಾರತೀಯ ಹಾಕಿ ಪಾಲಿಗೆ ಇಮ್ರಾನ್ ದ್ರೋಣಾಚಾರ್ಯನೇ ಸರಿ. ಇಮ್ರಾನ್ ಗರಡಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ತಂಡದ ಆಟಗಾರರು, ಆಟಗಾರ್ತಿಯರು ಪಳಗಿದ್ದಾರೆ. ಮಹಿಳಾ ತಂಡದ ಸೂಪರ್ ಸ್ಟಾರ್ಗಳಾಗಿರುವ ರಿಟಾ ಪಾಂಡೆ, ರಜನಿ ಚೌಧರಿ, ಪ್ರತಿಮಾ ಚೌಧರಿಯಂತಹ ಆಟಗಾರ್ತಿಯರು ಇಮ್ರಾನ್ ಶಿಷ್ಯೆಯರೇ.
ಅಷ್ಟೇ ಏಕೆ? ಸಂಜೀವ್ ಓಜ್ಹಾ, ಜನಾರ್ಧನ್ ಗುಪ್ತಾ, ಸನ್ವಾರ್ ಆಲಿ ಸೇರಿದಂತೆ ಹಲವು ಆಟಗಾರರು ಕೂಡ ಇಮ್ರಾನ್ ಕೋಚಿಂಗ್ನಿಂದಲೇ ಹಾಕಿ ಪಾಠದ ಪಟ್ಟುಗಳನ್ನು ಕಲಿತಿದ್ದರು ಅನ್ನೋದು ಗಮನಾರ್ಹ. ಇನ್ನು ಇಮ್ರಾನ್ ಕೇವಲ ಅದ್ಭುತ ಕೋಚ್ ಮಾತ್ರವಲ್ಲ. ಉತ್ತಮ ಆಟಗಾರ ಕೂಡ ಆಗಿದ್ದರು. ಇಮ್ರಾನ್ ಫರ್ಟಿಲೈಸೇಷನ್ ಕಾರ್ಪೋರೇಷನ್ ತಂಡಕ್ಕೆ ಆಡಿದ್ದರು. ಅದಾದ ಬಳಿಕ ಹಲವು ಯುವ ಆಟಗಾರರಿಗೆ ತರಬೇತಿ ನೀಡಿದ್ದರು.
ಆದ್ರೆ ನೋಡ್ರಿ, ಈಗ ಆ ಸಂಸ್ಥೆ ಅಸ್ಥಿತ್ವದಲ್ಲಿ ಇಲ್ಲ. ಹೀಗಾಗಿ ಜೀವನಕ್ಕಾಗಿ ಇಮ್ರಾನ್ ಪರದಾಡುತ್ತಿದ್ದಾರೆ. ಸದ್ಯಕ್ಕೆ ಇಮ್ರಾನ್ ಪಡೆಯುತ್ತಿರುವುದು ಕೇವಲ 1000 ರೂಪಾಯಿಗಳ ಮಾಸಾಶನ. ಆದ್ರೆ ಇಮ್ರಾನ್ ಮಗಳ ಮದುವೆ ಮಾಡಬೇಕಿದೆ. ಎಲ್ಲಾ ಕನಸುಗಳು ನುಚ್ಚು ನೂರಾಗಿದ್ದರೂ ಹಠ ಬಿಡದ ಇಮ್ರಾನ್ ಎರಡು ಸೈಕಲ್ಗಳಲ್ಲಿ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ಟ್ರ್ಯಾಕ್ ಸೂಟ್ ಮಾರಿ ಜೀವನ ನಿರ್ವಹಣೆ ಮಾಡುವ ಸ್ಥಿತಿಗೆ ತಲುಪಿಸಿದ್ದಾರೆ.
ಒಟ್ಟಿನಲ್ಲಿ ಬದುಕಿನಲ್ಲಿ ಎಷ್ಟೇ ಕಷ್ಟಗಳನ್ನು ಎದುರಿಸಿದ್ರೂ ಇಮ್ರಾನ್ , ಹಾಕಿ ಬಗೆಗಿರುವ ಪ್ರೀತಿಯನ್ನು ಕಡಿಮೆ ಮಾಡಿಲ್ಲ. ಇಂದಿಗೂ ಹಾಕಿ ಆಟಗಾರರಿಗೆ ತರಬೇತಿ ನೀಡುವ ಆಸೆ ಇಮ್ರಾನ್ಗಿದೆ. ತಾನು ಎಷ್ಟೇ ಕಷ್ಟಪಟ್ರು ಸರಿ, ಹಾಕಿ ಆಟಕ್ಕೆ ಬರುವ ಯುವಕರ ಭವಿಷ್ಯ ಗಟ್ಟಿಯಾಗಿ ಇರಬೇಕು ಅನ್ನೋದು ಈ ದ್ರೋಣಾಚಾರ್ಯನ ಮನದ ಮಾತು.