ಭಾರತವು ಬಾಂಗ್ಲಾದೇಶದ ನಿಜವಾದ ಸ್ನೇಹಿತ ಎಂದು ಹೇಳಿರುವ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಗುರುವಾರ ಭಾರತದೊಟ್ಟಿಗೆ 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಗುರುವಾರ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಮಾತನಾಡಿದ ಹಸೀನಾ, ಭಾರತದೊಂದಿಗಿನ ಭೇಟಿ ಸಂತೋಷ ಎಂದು ಹೇಳಿದರು. 1971ರಲ್ಲಿ ಪಾಕಿಸ್ತಾನ ವಿರುದ್ಧದ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಭಾರತದ ಸಹಾಯವನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
ನಿನ್ನೆಯಷ್ಟೇ (ಡಿ.16, ಬುಧವಾರ) ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧ ವಿಜಯ ಸಾಧಿಸಿದ 49ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.
7 ಒಪ್ಪಂದಗಳಿಗೆ ಸಹಿ: 1965ರಲ್ಲಿ ಸ್ಥಗಿತಗೊಂಡಿದ್ದ ಚಿಲಿಹತಿ-ಹಲ್ದಿಬಾರಿ ರೈಲು ಸಂಪರ್ಕ ಪುನಶ್ಚೇತನ ಸೇರಿದಂತೆ ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಬಲ್ಲ ಏಳು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಸಹಿ ಹಾಕಿವೆ.
ರೈಲು ಸಂಪರ್ಕ ಪುನಶ್ಚೇತನ ಹಾಗೂ ಒಪ್ಪಂದಕ್ಕೆ ಸಹಿಹಾಕುವ ಜತೆಗೆ, ಹೈಡ್ರೋಕಾರ್ಬನ್, ಕೃಷಿ ಮತ್ತು ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಉಭಯ ದೇಶಗಳ ನಾಯಕರು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಶೃಂಗಸಭೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ನೆರೆಹೊರೆಯ ಮಿತ್ರರಾಷ್ಟ್ರಗಳಲ್ಲಿ ಭಾರತ, ಬಾಂಗ್ಲಾದೇಶಕ್ಕೆ ಪ್ರಮುಖ ಸ್ಥಾನ ನೀಡಿದೆ’ ಎಂದರು.
ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ’ ಎಂದು ಅವರು ‘ಬಾಂಗ್ಲಾ ವಿಮೋಚನಾ ದಿನದ ಅಂಗವಾಗಿ, ನಿಮ್ಮೊಂದಿಗೆ ನಾವು ಭಾರತದಲ್ಲಿ ‘ವಿಜಯ್ ದಿವಸ್’ ಆಚರಿಸುತ್ತಿದ್ದೇವೆ’ ಎಂದು ಹೇಳಿದರು. ಇದೇ ವೇಳೆ ಬಾಂಗ್ಲಾ ಪ್ರಧಾನಿ ಹಸೀನಾ, ‘ಭಾರತ ನಮ್ಮ ನಿಜವಾದ ಸ್ನೇಹಿತ’ ಎಂದು ಬಣ್ಣಿಸಿದರು.
ನಂತರ ಮೋದಿ ಮತ್ತು ಹಸೀನಾ ಅವರು ಬಾಂಗ್ಲಾ ದೇಶದ ಸಂಸ್ಥಾಪಕ ಮುಜಿಬುರ್ ರಹಮಾನ್ ಮತ್ತು ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಪರಂಪರೆ ಸಾರುವ ಡಿಜಿಟಲ್ ಪ್ರದರ್ಶನವನ್ನು ಉದ್ಘಾಟಿಸಿದರು.
ಕ್ವಾರೆಂಟೀನ್ ಆರಂಭಿಸಿದ ರೋಹಿತ್ ಶರ್ಮಾ
ಆಸ್ಟ್ರೇಲಿಯಾ ತಲುಪಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 14 ದಿನಗಳ ಕ್ವಾರಂಟೈನ್ ಆರಂಭಿಸಿದ್ದಾರೆ. ಡಿಸೆಂಬರ್ 17ರಿಂದ ಶರ್ಮಾ ಕ್ವಾರಂಟೈನ್ ಶುರುವಾಗಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಹ್ಯಾಮ್‌ಸ್ಟ್ರಿಂಗ್‌ಗೆ ಒಳಗಾಗಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಐಪಿಎಲ್ ಬಳಿಕ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರಲಿಲ್ಲ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ರೋಹಿತ್ ಚೇತರಿಸಿಕೊಳ್ಳುತ್ತಿದ್ದರು.
ಡಿಸೆಂಬರ್ 15ರಂದು ದುಬೈ ಮೂಲಕ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಿದ್ದ ರೋಹಿತ್, ಡಿಸೆಂಬರ್ 16ರಂದು ಸಿಡ್ನಿ ತಲುಪಿದ್ದರು. ಮರುದಿನದಿಂದ ಶರ್ಮಾ ಅವರ ಕ್ವಾರಂಟೈನ್ ಶುರುವಾಗಿದೆ. ಮೂರನೇ ಟೆಸ್ಟ್ ವೇಳೆಗೆ ಶರ್ಮಾ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳಲಿದೆ.
ಆಸ್ಟ್ರೇಲಿಯಾಕ್ಕೆ ಪ್ರವಾಸ ಬಂದಿರುವ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರಿಂದ ಸೋಲು, ಟಿ20ಐ ಸರಣಿಯಲ್ಲಿ 2-1ರ ಗೆಲುವು ಕಂಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಕುತೂಹಲ ಮೂಡಿಸಿದೆ. ಇತ್ತಂಡಗಳ ಮಧ್ಯೆ ಈಗಾಗಲೇ ಆರಂಭಿಕ ಪಂದ್ಯವಾಗಿ ಪಿಂಕ್‌ಬಾಲ್ ಟೆಸ್ಟ್ ನಡೆಯುತ್ತಿದೆ.
ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಚ್ಛಿಸಿದ ರೋರಿಂಗ್ ಸ್ಟಾರ್ ಹೇಳಿದ್ದೇನು?
ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ ಈಗ ಜನ್ಮದಿನದ ಸಂಭ್ರಮ. ಹೌದು, ಡಿ.17ರಂದು ಅವರು ಜನ್ಮದಿನ. ಪ್ರತಿ ಬಾರಿ ಆ ದಿನ ಅವರು ಫ್ಯಾನ್ಸ್ ಜೊತೆ ಸೇರಿ ಸಂಭ್ರಮಿಸುತ್ತಿದ್ದರು. ಆದರೆ, ಈ ಬಾರಿ ಅದು ಸಾಧ್ಯವಾಗುತ್ತಿಲ್ಲ. ಕಾರಣ, ಕೊರೊನಾ! ಈ ವರ್ಷ ಅನೇಕ ಸೆಲೆಬ್ರಿಟಿಗಳು ತಮ್ಮ ಬರ್ತ್ ಡೇ ಆಚರಣೆಯನ್ನು ರದ್ದು ಮಾಡಿದ್ದರು. ಆ ಸಾಲಿಗೆ ಈಗ ನಟ ಶ್ರೀಮುರಳಿ ಕೂಡ ಸೇರಿಕೊಂಡಿದ್ದಾರೆ. ಅವರು ಕೂಡ ಈ ಬಾರಿ ಜನ್ಮದಿನ ಆಚರಣೆ ಬೇಡ ಎಂದಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಈ ಬಾರಿ ನನ್ನ ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುವುದಿಲ್ಲ. ಕಾರಣ, COVID! ನಮ್ಮಿಂದ ಬೇರೆ ಯಾರಿಗೂ ಅನಾನುಕೂಲತೆಗಳು ಆಗುವುದು ಬೇಡ. ನಾನು ಕಾರಣಾಂತರಗಳಿಂದ ಮನೆಯಲ್ಲಿ ಇರುವುದಿಲ್ಲ. ಯಾರು ಸಹಿತ ಮನೆ ಹತ್ತಿರ ಬಂದು ಬೇಸರ ಪಟ್ಟುಕೊಳ್ಳಬೇಡಿ. ಯಾವುದೇ ಹಾರ, ಕೇಕ್, ಗಿಫ್ಟ್‌ಗಳಿಗೆ ಹಣ ಖರ್ಚು ಮಾಡಬೇಡಿ. ಬದಲಾಗಿ ಹಸಿವಿರುವವರಿಗೆ ಕೈಯಲ್ಲಿ ಆದಷ್ಟು ಅನ್ನದಾನವನ್ನು ಮಾಡಿ ಎಂದು ಕೋರಿಕೊಳ್ಳುತ್ತೀನಿ. ನಮ್ಮ ಎಲ್ಲಾ ಸಂಘದ ಚಿನ್ನಗಳಿಗೆ ಈ ಮೂಲಕ ನಾನು ತಿಳಿಸುತ್ತಿದ್ದೀನಿ’ ಎಂದು ಶ್ರೀಮುರಳಿ ಹೇಳಿದ್ದಾರೆ.
ನಿಮ್ಮನ್ನು ನೊಡೋಕೆ ಆಗದೇ ಇರುವುದಕ್ಕೆ ಬೇಸರ ನನಗೂ ಇದೆ. ಹಾಗಾಗಿ ಅಭಿಮಾನಿ ದೇವರುಗಳೇ, ಆದಷ್ಟು ಬೇಗ ಎಲ್ಲವೂ ಸುಧಾರಿಸಿಕೊಂಡ ನಂತರ ಸಿಗೋಣ! ನಿಮ್ಮ ಪ್ರೀತಿ, ಅಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಅದಕ್ಕೆ ನೀವು ಮಾಡಬೇಕಾಗಿರುವುದು ಏನೆಂದರೆ, ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟು ಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ’ ಎಂದು ಶ್ರೀಮುರಳಿ ತಿಳಿಸಿದ್ದಾರೆ.