ಭಾರಿ ಮಳೆಯಿಂದ ಬೆಂಗಳೂರು-ಮಂಗಳೂರು ಹೆದ್ದಾರಿ 75 ರಲ್ಲಿ ಭೂಕುಸಿತ
ಹಾಸನ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ ಸಂಭವಿಸಿದೆ.
ಶಿರಾಡಿಘಾಟ್ ರಸ್ತೆಯಲ್ಲಿ ಎರಡು ಕಡೆ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆಯಲ್ಲಿನ ಭೂಕುಸಿತದಿಂದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯಿಂದಾಗಿ ಕೆರೆ ಕೋಡಿಗಳು ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ.
ತಡೆಗೋಡೆ ನಿರ್ಮಿಸಿದ್ದರು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಣ್ಣು ಕುಸಿಯುತ್ತಿದೆ. ಹೀಗಾಗಿ ಮರಗಳು ನೆಲಕ್ಕೆ ಉರುಳುತ್ತಿದ್ದು, ಅಪಾರ ಮೌಲ್ಯದ ಕಾಫಿ ಬೆಳೆ ನಾಶವಾಗಿದೆ. ಇನ್ನು ವೀಕೆಂಡ್ ಹಿನ್ನೆಲೆ ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿದೆ. ಆದರೆ ಭೂ ಕುಸಿತದಿಂದ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.