ಕಾಲೇಜು ಬ್ಯಾಗಿನಲ್ಲಿ ದಾಖಲೆ ಇಲ್ಲದೆ ಒಂದು ಕೋಟಿ ಹಣ ಸಾಗಿಸುತ್ತಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬ ಮಂಗಳೂರು ಉತ್ತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಮಂಜುನಾಥ್ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ 6.30ರ ಸಮಯದಲ್ಲಿ ಬಸ್‍ನಿಂದ ಇಳಿದ ಮಂಜುನಾಥ್, ವಿದ್ಯಾರ್ಥಿಯಂತೆ ಕಾಲೇಜು ಬ್ಯಾಗ್ ಹಾಕಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ.
ಗಸ್ತಿನಲ್ಲಿದ್ದ ಮಂಗಳೂರು ಉತ್ತರ ಠಾಣೆ ಪೊಲೀಸರು ಅನುಮಾನಗೊಂಡು ಮಂಜುನಾಥ್‍ನನ್ನು ತಡೆದು ಬ್ಯಾಗ್ ಪರಿಶೀಲಿಸಿದಾಗ 2000 ಹಾಗೂ 500ರೂ. ಮುಖಬೆಲೆಯ ಒಂದು ಕೋಟಿ ಹಣ ಪತ್ತೆಯಾಗಿದೆ.
ತಕ್ಷಣ ಆತನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಒಂದು ಕೋಟಿ ಹಣದ ಬಗ್ಗೆ ದಾಖಲೆ ನೀಡಲು ವಿಫಲನಾದ.ಹೆಸರು ಕೇಳಿದಾಗ ಒಂದೊಂದು ಬಾರಿ ಒಂದೊಂದು ಹೆಸರು ಹೇಳುತ್ತಿದ್ದಾತ ಕೊನೆಗೆ ನಾನು ಬೆಂಗಳೂರಿನ ಮಂಜುನಾಥ್ ಎಂದು ತಿಳಿಸಿದ್ದಾನೆ.
ಸದ್ಯಕ್ಕೆ ಹಣದ ಬಗ್ಗೆ ಯಾವುದೇ ಮಾಹಿತಿ ಹಾಗೂ ದಾಖಲೆಗಳನ್ನು ಆತ ನೀಡಿಲ್ಲ. ಹವಾಲಾ ಹಣ ಇರಬಹುದು ಎಂದು ಪೊಲೀಸರು ಶಂಕಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಮಂಜುನಾಥ್‍ನನ್ನು ವಶಕ್ಕೆ ಪಡೆದು ಒಂದು ಕೋಟಿ ಹಣ ಹಾಗೂ ಆತನ ಪೂರ್ವಾಪರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.