ಇತಿಹಾಸ ಪ್ರಸಿದ್ಧ ಮಂಜೇಶ್ವರದ ಅನಂತೇಶ್ವರ ದೇವಾಲಯದ ರಥೋತ್ಸವ ಇಂದು ನೆರವೇರಿತು. ಎಲ್ಲರಿಗೂ ಕುಕ್ಕೆ ಸುಬ್ರಮಣ್ಯ ಪುಣ್ಯಕ್ಷೇತ್ರ ಗೊತ್ತೇ ಇದೆ..! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರೋ ಕುಕ್ಕೆ ಸುಬ್ರಮಣ್ಯ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸೋ ಕಾರಣಿಕದ ಸನ್ನಿಧಿ..! ಕರ್ನಾಟಕದ ಮೂಲೆಯಲ್ಲಿದ್ದರೂ ದೇಶ-ವಿದೇಶದಿಂದಲೂ ಭಕ್ತರನ್ನು ತನ್ನತ್ತ ಸೆಳೆದಿರೋ ಪವಿತ್ರ ದೇವಾಲಯ..! ಇಲ್ಲಿ ವರ್ಷ ಪೂರ್ತಿ ಭಕ್ತರ ಹಾಜರಿ ಇದ್ದೇ ಇರುತ್ತೆ..! ಎಲ್ಲೆಲ್ಲಿಂದಲೋ ಭಕ್ತರು ಬಂದು ಹೋಗ್ತಾನೆ ಇರ್ತಾರೆ..! ಪ್ರತಿವರ್ಷ ಸಾಮಾನ್ಯವಾಗಿ ಈ ಸಮಯದಲ್ಲಿ ಅಂದರೆ ಮಾರ್ಗಶಿರಾ ಮಾಸದಲ್ಲಿ ಇಲ್ಲಿ ಭಕ್ತ ಮಹಾಸಾಗರವೇ ಮೇಳೈಸಿರುತ್ತೆ..! ಕಾರಣ, ರಥೋತ್ಸವದ ಸಂಭ್ರಮ..! ಪ್ರತಿ ವರ್ಷದಂತೆ ಈ ವರ್ಷವೂ ಸುಬ್ರಮಣ್ಯ ಚಂಪಾಷಷ್ಠಿ ಉತ್ಸವವು ಗಮನಸೆಳೆಯುತ್ತದೆ. ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಯಾವುದ್ಯಾವುದೋ ದೇವಾಲಯಕ್ಕೆ ಬಂದ ಭಕ್ತರು ತಾ ಮುಂದು ನಾ ಮುಂದು ಅಂತ ಕುಕ್ಕೆ ಸುಬ್ರಮಣ್ಯ ಸ್ವಾಮಿ ಸನ್ನಿಧಿಯತ್ತ ಬರ್ತಾರೆ.! ತಮ್ಮ ಹರಕೆಗಳನ್ನು ಸುಬ್ರಮಣ್ಯನಿಗೆ ಸಲ್ಲಿಸ್ತಾರೆ..! ಮಕ್ಕಳು, ಯುವಕರು, ವೃದ್ಧರು ಅಂತ ಯಾವುದೇ ವಯಸ್ಸಿನ ಹಂಗಿಲ್ಲದೆ ಭಕ್ತರು ದೇವನ ದರ್ಶನ ಪಡೆದು ಪುನೀತರಾಗ್ತಾರೆ..! ವಿಭೃತೋತ್ಸವ, ನೌಕಾ ವಿಹಾರ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತದೆ. ಕೊಪ್ಪರಿಗೆ ಇಳಿಯುವುದು, ನೀರುಬಂಡಿ ಉತ್ಸವ ಹಾಗೂ ದೈಬಗಳ ನಡಾವಳಿ ಅದ್ಭುತ. ಹೀಗೆ ನಾನಾ ಬಗೆಯ ಆಚರಣೆಗಳಲ್ಲಿ ಭಕ್ತರು ಪಾಲ್ಗೊಂಡು ತಮ್ಮಿಷ್ಟದ ಸ್ವಾಮಿ ಪೂಜೆಯನ್ನು ಸಲ್ಲಿಸ್ತಾರೆ…! ಈ ರಥೋತ್ಸವ ಆಗಲಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸೋ ಕುಕ್ಕೆ ಸುಬ್ರಮಣ್ಯ ಸ್ವಾಮಿಯ ಬಗ್ಗೆಯಾಗಲೀ ನಿಮಗೆ ಗೊತ್ತೇ ಇದೆ..!
ಆದರೆ ಇದೇ ರೀತಿಯ ಆಚರಣೆಗಳನ್ನು ಆಚರಿಸಿಕೊಳ್ಳುವ, ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸೋ `ಮಂಜೇಶ್ವರ ಅನಂತೇಶ್ವರ’ ದೇವರ ಬಗ್ಗೆ ಎಷ್ಟು ಜನರಿಗೆ ಗೊತ್ತು..!? ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವಂತೆಯೇ ಈ ಅನಂತೇಶ್ವರನ ಸನ್ನಿಧಿಯಲ್ಲಿ ಪೂಜೆ ನಡೆಯುತ್ತೆ..! ಕುಕ್ಕೆ ಸುಬ್ರಮಣ್ಯ ಸ್ವಾಮಿಯ ರಥೋತ್ಸವದಂದೇ ಅನಂತೇಶ್ವರನ ರಥೋತ್ಸವ..! ಈ ಬಗ್ಗೆ ಎಷ್ಟು ಜನರಿಗೆ ಗೊತ್ತೋ ಗೊತ್ತಿದೆಯೋ ಗೊತ್ತಿಲ್ಲ..! ಬೇಡಿ ಬಂದ ಭಕ್ತರ ಆಸೆ, ಆಶೋತ್ತರ, ಇಷ್ಟಾರ್ಥಗಳನ್ನು ದಯಪಾಲಿಸೋ ಮಂಜೇಶ್ವರ ಅನಂತೇಶ್ವರನ ಬಗ್ಗೆ ಪರಿಚಯವಿಲ್ಲಿದೆ..!
ಮಂಜೇಶ್ವರ ಅನಂತೇಶ್ವರ ದೇವಾಲಯ ಇರೋದು ಮಂಗಳೂರಿನಿಂದ ಕೇವಲ 17 ಕಿಮೀ ದೂರದಲ್ಲಿ. ಈ ಪುಣ್ಯ ಕ್ಷೇತ್ರ ಹೆಸರಿಗೆ ಮಾತ್ರ ಕೇರಳಕ್ಕೆ ಸೇರಿದೆ ಬಿಟ್ಟರೆ ಇಲ್ಲಿನ ಜನರ ಭಾವನೆ. ತನು-ಮನ ಎಲ್ಲವೂ ಕನ್ನಡ ಕನ್ನಡ ಕನ್ನಡ..! ಈ ಮಂಜುಳ ಕ್ಷೇತ್ರದ ಅನಂತೇಶ್ವರ ದೇವಾಲಯ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪುರಾತನ ದೇವಾಲಯ..!
ಈ ಪುಣ್ಯ ಕ್ಷೇತ್ರದಲ್ಲಿ ಈಶ್ವರ ಅನಂತನೊಂದಿಗೆ ನೆಲೆಸಿದ್ದಾನೆ. ಅದೇ ಕಾರಣಕ್ಕೆ ಈಶ್ವರ ಅನಂತೇಶ್ವರನಾಗಿ ಭಕ್ತರನ್ನು ಬರಮಾಡಿಕೊಳ್ಳುತ್ತಿದ್ದಾನೆ..! ಪುರಾಣ ಕಾಲದಲ್ಲೇ ಈ ದೇವಾಲಯ ಇತ್ತೆಂದು ಹೇಳಲಾಗುತ್ತದೆ..! ಸರಿಯಾದ ಕಾಲಮಾನ ಗೊತ್ತಿಲ್ಲ..! ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದು ಹಿರಿಯರು ಈ ಸನ್ನಿಧಿಯ ಇತಿಹಾಸದ ಬಗ್ಗೆ ಹೇಳ್ತಾರೆ..!
ಇಲ್ಲಿಗೆ ಸಂಬಂಧಿಸಿದ ಒಂದು ಕಥೆಯಂತೆ ಕಲಿಯುಗದ ಪ್ರಾರಂಭವಾಯ್ತಲ್ಲಾ..?! ಆಗ ಶಿವನೇ ನರಸಿಂಹನ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಿದನಂತೆ..! ನಂತರ ಈ ಸ್ಥಳದ ಮಹಾತ್ಮೆಯನ್ನು ತಿಳಿದಂತಹ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ ವಿರೂಪಾಕ್ಷ ಅನ್ನೋ ಹೆಸರಿನ ಸನ್ಯಾಸಿ ಇಲ್ಲಿಯೇ ಶಿವನನ್ನು ಪ್ರಾಥರ್ಿಸ್ತಾ ತನ್ನ ಬದುಕಿನ ಕೊನೆಯ ದಿನಗಳನ್ನು ಕಳೆದರಂತೆ..!
ವಿರೂಪಾಕ್ಷ ಸ್ವಾಮಿಯ ಕಾಲದ ನಂತರ ಹಲವಾರು ವರ್ಷಗಳವರೆಗೆ ಈ ದೇವಾಲಯದ ಬಗ್ಗೆ ಯಾವುದೇ ಮಾಹಿತಿ ಸಿಗಲ್ಲ..! ಒಮ್ಮೆ ರಂಗಶರ್ಮ ಎಂಬ ವ್ಯಕ್ತಿ ಗೋವಾದಿಂದ ರಾಮೇಶ್ವರಕ್ಕೆ ಹೋಗುವಾಗ ಈ ಕ್ಷೇತ್ರದಲ್ಲಿ ಬಂದು ಉಳಿದಿದ್ದರಂತೆ..! ಆಗ ಅವರ ಕನಸಲ್ಲಿ ಬಂದು ಗುಡಿ ಕಟ್ಟೆಂದು ಹೇಳಿದನಂತೆ..! ಆಗ ಶರ್ಮಾರವರು ಗೋವಾದಿಂದ ತಾವು ತಂದಿದ್ದ `ಶೇಷನೊಂದಿಗೆ’ ಶಿಬ ದೇವನ ಪ್ರತಿಷ್ಠೆ ಮಾಡಿ ಗುಡಿ ಕಟ್ಟಿ ಪೂಜೆ ಮಾಡಿದರಂತೆ..!
ಅಂತೆಯೇ ಮದ್ವಾಚಾರ್ಯರು ಕೂಡ ಚಾತುರ್ಮಾಸ ವ್ರತದಲ್ಲಿ ಈ ಕ್ಷೇತ್ರಕ್ಕೆ ತಂಗಿದ್ದರಂತೆ..! ಕಣ್ವ ತೀರ್ಥದಲ್ಲಿ ಮಿಂದು, ನರಸಿಂಹ ದೇವರನ್ನು ಪೂಜಿಸಿದ್ದರಂತೆ ಮದ್ವಾಚಾರ್ಯರು.
1677ರಲ್ಲಿ ಭೀಕರ ಚಂಡಮಾರುತ ಸಂಭವಿಸಿದಾಗ ದೇವಾಲಯದ ಕೆಲಭಾಗಗಳು ಹಾಣಿಯಾಗಿದ್ದವಂತೆ..! ನಂತರ 1804ರಲ್ಲಿ ಇದರ ಜೀರ್ಣೋದ್ಧಾರ ಮಾಡಿ ಶ್ರೀಮದ್ ವಿಭುದೇಂದ್ರ ತೀರ್ಥರು ಭದ್ರ ನರಸಿಂಹ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದರಂತೆ..!
ಅನಂತೇಶ್ವರನೇ ಮುಖ್ಯ ದೇವನಾಗಿರೋ ಈ ಪುಣ್ಯಕ್ಷೇತ್ರದ ದೇವಾಲಯಕ್ಕೆ ಇವತ್ತು ಭವ್ಯವಾದ ಗೋಪುರ ನಿರ್ಮಾಣವಾಗಿದೆ..! ವಿಶಾಲವಾದ ಪ್ರದಕ್ಷಿಣ ಪಥ, ಕಾಶೀಮಠ ಸಂಸ್ಥಾನವೂ ಇದೆ..!
ದೇವರಿಗೆ ಇಲ್ಲಿ ಪ್ರತಿದಿನ ನಿತ್ಯಪೂಜೆ , ಅಮೃತಪಡಿ, ನಂದಾದೀಪ, ಅನ್ನ ಸಂತರ್ಪಣೆ ನಡೆಯುತ್ತೆ..! ಭಕ್ತರೆಲ್ಲರಿಗೂ ಮುಡಿ ಗಂಧಪ್ರಸಾದ ನೀಡಲಾಗುತ್ತೆ..!
ಅದೇರೀತಿ ಮೊದಲೇ ಹೇಳಿರುವಂತೆ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುತ್ತಿರುವಂತೆ ಇಲ್ಲಿಯೂ ಒಂದು ವಾರಗಳ ಕಾಲ ಪೂಜೆ ಸಮಾರಾಧನೆ ಮತ್ತು ರಥೋತ್ಸವ ನಡೆಯುತ್ತೆ..! ಬ್ರಹ್ಮರಥದಲ್ಲಿ ಸ್ವಾಮಿಯನ್ನು ಮೆರಣಿಗೆ ಮಾಡಲಾಗುತ್ತೆ..! ಇಂದು ಅನಂತೇಶ್ವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ. ಈ ಕಾರ್ಯಕ್ರಮಕ್ಕೆ ಶ್ರೀ ಕಾಶೀಮಠ ಶ್ರೀ ಸಂಯ್ಯಮೀಂದ್ರ ತೀರ್ಥ ಸ್ವಾಮೀಜಿಗಳು ಆಗಮಿಸಿದ್ದಾರೆ..!
ಹ್ಞಾಂ ಒಂದು ವಿಷಯವನ್ನು ನಿಮಗೆ ಹೇಳಲೇ ಬೇಕು. ಕುಕ್ಕೆ ಸುಬ್ರಮಣ್ಯ ಸ್ವಾಮಿ ಸನ್ನಿಧಿಯಲ್ಲಿ ನಡೆಯುವಂತೆಯೇ ಇಲ್ಲಿಯೂ ಪೂಜೆ, ಆಚರಣೆಗಳು ನಡೆಯುತ್ತವೆ ಅನ್ನೋದನ್ನು ಹೇಳಿದ್ದೇವೆ. ಅದೇರೀತಿ ಮದುವೆಯಾಗದೇ ಇರೋ ಮಹಿಳೆಯರು ಮದುವೆ ಆಗುವಂತೆಯೂ, ಮಕ್ಕಳಿಲ್ಲದೇ ಕೊರಗುವವರು ಮಕ್ಕಳಿಗಾಗಿಯೂ, ಮನೆಕಷ್ಟ ಪರಿಹಾರ, ಆರೋಗ್ಯ, ಜಾನುವಾರುಗಳಿಗಾಗಿ, ಅಭ್ಯುದಯಕ್ಕಾಗಿ ಅನಂತೇಶ್ವರನನ್ನು ಪ್ರಾರ್ಥಿಸಿದರೆ ಖಂಡಿತಾ ಒಳ್ಳೆಯದಾಗೇ ಆಗುತ್ತೆ ಎಂಬ ನಂಬಿಕೆ ಇದೆ. ಅಂತೆಯೇ ಕುಕ್ಕೆ ಸುಬ್ರಮಣ್ಯಕ್ಕೆ ನೀವು ಹರಕೆಯನ್ನು ಕಟ್ಟಿಕೊಂಡಿದ್ದರೆ ಅಲ್ಲಿಗೆ ಹೋಗಿ ಹರಕೆ ತೀರಿಸಲು ಆಗದೇ ಇದ್ದರೆ ಮಂಜೇಶ್ವರ ಅನಂತೇಶ್ವರ ದೇವಾಲಯಕ್ಕೆ ಬಂದು ತೀರಿಸಿದರೂ ಆಗುತ್ತೆ..! ಕುಕ್ಕೆ ಸುಬ್ರಮಣ್ಯ ತನ್ನ ಸನ್ನಿಧಿಯಲ್ಲೇ ಕೂತು ಹರಕೆಯನ್ನು ಪಡೆದುಕೊಂಡು ನಿಮಗೆ ಒಳ್ಳೆಯದನ್ನು ಮಾಡ್ತಾನೆ..! ಒಮ್ಮೆಯಾದ್ರೂ ಈ ಪುಣ್ಯಕ್ಷೇತ್ರಕ್ಕೆ ಹೋಗಿ ಬನ್ನಿ.
ಮಂಜೇಶ್ವರ ಮಹೋತ್ಸವ
ಮಂಜೇಶ್ವರ ಮಹೋತ್ಸವವು ತಾ ಮಾರ್ಗಶಿರ ಶುದ್ಧ ಪಾಡ್ಯ ದಿಂದ ತಾ ಮಾರ್ಗಶಿರ ಶುದ್ಧ ಸಪ್ತಮಿ ವರೆಗೆ ನಡೆಯಲಿರುವುದು. ಈ ಬಾರಿಯ ರಥೋತ್ಸವವೂ ಸಹ ಅದ್ಧೂರಿಯಾಗಿ ನಡೆದಿದೆ.