ಇಡೀ ಜಗತ್ತಿನಲ್ಲಿ ಒಬ್ಬರಿಗೊಬ್ಬರು ಆಗದವರೇ ಕಾಣಸಿಗುತ್ತಾರೆ. ಅಣ್ಣ-ತಮ್ಮ, ಅಕ್ಕ-ತಂಗಿ, ಚಿಕ್ಕಪ್ಪ, ದೊಡ್ಡಪ್ಪ ಕೊನೆಗೆ ಹೆತ್ತ ತಂದೆಯೂ ಕೂಡಾ ಕೆಲ ಕ್ಷಣ ಸ್ವಾರ್ಥಿಯಾದ ಘಟನೆ ನಮ್ಮ ಮುಂದೆ ನಡೆದಿವೆ. ಆದರೆ ಹೆತ್ತ ತಾಯಿ ಸ್ವಾರ್ಥಿಯಾಗಿದ್ದನ್ನು ಎಲ್ಲೂ ಕಂಡಿಲ್ಲ, ಕೇಳಿಲ್ಲ. ತಾಯಿಯೊಬ್ಬಳು ಮಾತ್ರ ತನ್ನ ಮಕ್ಕಳಿಗೆ ಮೋಸ ಮಾಡಲು ಬಯಸುವುದಿಲ್ಲ. ಅದು ಎಷ್ಟೇ ಕಷ್ಟ ಎದುರಾದರೂ ಸರಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಅಂಥದ್ದೇ ಒಂದು ಕಥೆ ಇಲ್ಲಿದೆ ನೋಡಿ.
ದಕ್ಷಿಣಪುರಿ ಎಂಬಲ್ಲಿರುವ ಶಾನ್ನೋ ಎಂಬ ಮಹಿಳೆಯೇ ಈ ಕಥೆಗೆ ನಾಯಕಿ. ಈಕೆ ಬೆಳಗ್ಗೆ ಮನೆ ಬಿಟ್ಟಳೆಂದರೆ ಬರುವುದು ಸಂಜೆಯೇ. ಇಷ್ಟಕ್ಕೂ ಈಕೆ ಬೆಳಗ್ಗೆಯಿಂದ ಸಂಜೆಯವರೆಗೂ ಟ್ಯಾಕ್ಸಿ ಓಡಿಸುತ್ತಾಳೆ. ಟ್ಯಾಕ್ಸಿಯನ್ನು ಹತ್ತುವ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತಾಳೆ ಈ ಮಹಿಳೆ. ಇಷ್ಟರ ಮಧ್ಯೆ ತನ್ನ ಮೂವರು ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿದ್ದಾಳೆ ಈ ಮಹಾತಾಯಿ.
ಅದು 10 ವರ್ಷದ ಹಿಂದಿನ ಮಾತು ಶಾನ್ನೋಳ ಪತಿ ಇದ್ದಕ್ಕಿದ್ದಂತೆ ತೀರಿ ಹೋದ. ಆಗ ಕುಟುಂಬ ಹಾಗೂ ಮೂವರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಈಕೆಯ ಮೇಲೆ ಬಿತ್ತು. ಆದರೆ ಶಾನ್ನೋ ಹಿಂಜರಿಯಲಿಲ್ಲ. ಬದಲಿಗೆ ಗೆಲ್ಲಲೇಬೇಕು ಎಂಬ ಹಠ ಹೊತ್ತಳು. ಆಜಾದ್ ಫೌಂಡೇಶನ್ ನೆರವಿನಿಂದ ಡ್ರೈವಿಂಗ್ ಕಲಿತಳು. ಅಲ್ಲೇ ಮೂರು ವರ್ಷ ಡ್ರೈವರ್ ಆಗಿ ದುಡಿದಳು. ಕಳೆದ ಆರು ವರ್ಷಗಳಿಂದ ದೆಹಲಿಯಲ್ಲಿ ಓಲಾ ಕ್ಯಾಬ್ ಓಡಿಸುತ್ತಿದ್ದಾಳೆ.
ವಿಶೇಷವೆಂದರೆ ಈ ಧೀರ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ದೆಹಲಿಯ ಜನನಿಭಿಡ ರಸ್ತೆಗಳ ಮಧ್ಯೆ ವಾಹನ ಚಲಾಯಿಸುತ್ತಿದ್ದಾಳೆ. ಉತ್ತಮ ಸಂಬಳ ಪಡೆಯುತ್ತಿದ್ದಾಳೆ. ತನ್ನ ಮೂರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾಳೆ.
ಶಾನ್ನೋ ಒಂದು ಬಾರಿ ಅಮೀರ್ ಖಾನ್ ನಡೆಸಿಕೊಡುವ ಸತ್ಯಮೇವಜಯತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಆಗ ದೇಶದಲ್ಲಿ ಮಹಿಳಾ ಡ್ರೈವರ್ ಗಳು ಅತಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ ಎಂದು ಹೇಳಿದ್ದಳು.
ಒಮ್ಮೆ ಅಮೀರ್ ಖಾನ್ ಕೂಡ ಇವರ ಕ್ಯಾಬಲ್ಲಿ ಹೋಗಿದ್ದರು ..
ಈ ಮಾತು ಜನರ ಪ್ರಶಂಸೆಗೆ ಪಾತ್ರವಾಗಿತ್ತು.
ಪತಿಯ ನಿಧನದ ಬಳಿಕ ಜೀವನವೇ ಮುಗಿದುಹೋಯಿತು ಎಂದುಕೊಳ್ಳುವ ಮಹಿಳೆಯರೇ ಹೆಚ್ಚು. ಅಂತಹ ಮಹಿಳೆಯರಿಗೆ ಶಾನ್ನೋರಂತವರೇ ಸ್ಫೂರ್ತಿಯಾಗಬೇಕಿದೆ.
ಅಂದು ಈಕೆ ಅಪ್ಪ-ಅಮ್ಮನಿಂದಲೇ ತಿರಸ್ಕೃತರಾಗಿದ್ರು..!
22 ವರ್ಷದ ತಾರಿಕಾ ಬಾನು. ಇವರೊಬ್ಬ ಮಂಗಳಮುಖಿ. ತಮಿಳುನಾಡಿನ ಈಕೆ 12ನೇ ತರಗತಿ ಪಾಸು ಮಾಡಿದ ಭಾರತ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ತಾರಿಕಾ ಪಾತ್ರಳಾಗಿರುವವರು.
ತಾರಿಕಾ ಬಾನು ಅವರು ಆ ಕುಟುಂಬದ ನಾಲ್ಕನೇ ಮಗುವಾಗಿ ಜನಿಸಿದ್ರು. ತೂತುಕುಡಿ ಜಿಲ್ಲೆಯಲ್ಲಿ ಅವಳ ಮನೆಯಿದೆ. 18 ವರ್ಷವಾಗುವವರೆಗೂ ತಾರಿಕಾ ಮನೆಯಲ್ಲೇ ಇದ್ಲು. ಆದ್ರೆ ತನ್ನದಲ್ಲದ ತಪ್ಪಿಗೆ ಮನೆಯವರಿಂದ ತಿರಸ್ಕರಿಸಲ್ಪಟ್ಟ ತಾರಿಕಾ ಬದುಕು ಅರಸಿ ಅಲ್ಲಿಂದ ಹೊರನಡೆದ್ರು. ಮನೆ ಬಿಟ್ಟು ಓಡಿ ಬಂದ ತಾರಿಕಾ ಚೆನ್ನೈ ಸೇರಿಕೊಂಡ್ರು.
ಇನ್ನು ಮನೆ ಬಿಟ್ಟು ಚೆನ್ನೈಗೆ ಓಡಿ ಬಂದಾಗ ತಾರಿಕಾ ಬದುಕು ಈ ರೀತಿಯ ತಿರುವು ಪಡೆಯಬಹುದೆಂದು ಊಹಿಸಿಕೊಂಡಿರಲಿಲ್ಲವಂತೆ. ತಮ್ಮ ತಾಯಿಯ ಆಶೀರ್ವಾದದಿಂದ್ಲೇ ಇದೆಲ್ಲವೂ ಸಾಧ್ಯವಾಗಿದೆ ಎನ್ನುತ್ತಾರೆ ತಾರಿಕಾ. ಆದರೆ, ತಾಯಿ ಅಂದಾಕ್ಷಣ ತಾರಿಕಾ ತನ್ನ ಹೆತ್ತಮ್ಮನನ್ನು ನೆನೆದಿದ್ದಾಳೆ ಎಂದುಕೊಳ್ಳಬೇಡಿ. ಆಕೆ ಕೃತಜ್ಞತೆ ಅರ್ಪಿಸಿರುವುದು ಮಂಗಳಮುಖಿಯರ ಕಾರ್ಯಕರ್ತೆ ಗ್ರೇಸ್ ಬಾನು ಅವರಿಗೆ.
29 ವರ್ಷದ ಗ್ರೇಸ್ ಬಾನು ಕೂಡ ಒಬ್ಬ ಮಂಗಳಮುಖಿ. ಆಕೆ ಬದುಕಿನಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ತನ್ನಂತೆ ಇತರ ಮಂಗಳಮುಖಿಯರು ಕೂಡ ಜೀವನದಲ್ಲಿ ನೋವು ಅನುಭವಿಸಬಾರದು ಅನ್ನೋದು ಅವಳ ಉದ್ದೇಶ.ತಾರಿಕಾ ಸೇರಿದಂತೆ ಇತರ ಕೆಲವು ಮಂಗಳಮುಖಿಯರನ್ನು ಗ್ರೇಸ್ ಬಾನು ದತ್ತು ಪಡೆದಿದ್ದಾರೆ. ಅವರಿಗೆ ಆಸರೆ ನೀಡಿ, ಆರೈಕೆ ಮಾಡುತ್ತಿದ್ದಾರೆ.
ಮಂಗಳಮುಖಿಯರಿಗೆ ಸಾಮಾಜಿಕ ಭದ್ರತೆಯನ್ನೂ ಕೊಡಿಸುವ ಪ್ರಯತ್ನ ಗ್ರೇಸ್ ಬಾನು ಅವರದ್ದು. ಅಂಬತ್ತೂರ್ ನಲ್ಲಿರುವ ಪೆರುಂಥ ಲೈವರ್ ಕಾಮರಾಜರ್ ಸರ್ಕಾರಿ ಹೆಣ್ಣುಮಕ್ಕಳ ಹೈಸ್ಕೂಲ್ ನಲ್ಲಿ ತಾರಿಕಾ ಶಿಕ್ಷಣ ಪಡೆದಿದ್ದಾರೆ.
12ನೇ ತರಗತಿಯಲ್ಲಿ ಉತ್ತೀರ್ಣಳಾಗಿರುವ ತಾರಿಕಾ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ. ತಾರಿಕಾ ಮುಂದೊಂದು ದಿನ ಡಾಕ್ಟರ್ ಆಗ್ತಾರೆ ಅನ್ನೋ ವಿಶ್ವಾಸ ಗ್ರೇಸ್ ಬಾನುಗಿದೆ. ತಮಿಳುನಾಡು ಸರ್ಕಾರ ಕೂಡ ಇಂತಹ ಪ್ರತಿಭಾವಂತ ಮಂಗಳಮುಖಿಯರಿಗೆ ಪ್ರೋತ್ಸಾಹ ನೀಡಿದೆ.
ಒಟ್ಟಿನಲ್ಲಿ, ಹೆತ್ತವರಿಂದ್ಲೇ ತಿರಸ್ಕೃತಳಾದ ಮಂಗಳಮುಖಿ ತಾರಿಕಾ ಅವರು, ಈಗ ಕೀಳರಿಮೆ ಮೆಟ್ಟಿ ನಿಂತು ಮುನ್ನಡೆದ ಸಾಧಕಿ. ಇವರು ಇತರೆ ಮಂಗಳಮುಖಿಯರಿಗೂ ಸ್ಫೂರ್ತಿಯಾಗಿದ್ದಾರೆ
ಆಗಲ್ಲ ಆಗಲ್ಲ ಅನ್ಬೇಡಿ ..ಹೀಗೆ ಮಾಡಿದ್ರೆ ನಿಮ್ಗೆ ಯಶಸ್ಸು ಕಟ್ಟಿಟ್ಟ ಬುತ್ತಿ..!
ಅಯ್ಯೋ ನನ್ನತ್ರ ಆ ಕೆಲಸ ಮಾಡೋಕೆ ಆಗುತ್ತಾ..? ನನಗೆ ಅದು ಗೊತ್ತೇ ಇಲ್ಲ..! ಈಗ ಸಿಕ್ಕಾಪಟ್ಟೆ ಬ್ಯುಸಿ, ಆ ಕೆಲ್ಸನಾ ಹೇಗ್ ಮಾಡ್ಲಿ..? ನಾನ್ ಅನ್ಕೊಂಡಿದ್ದು ಯಾವ್ದು ಆಗಲ್ಲ’…! ಎಷ್ಟು ಮಾಡಿದ್ರೂ ಒಂದೇ..! ಏನೇನೂ ಪ್ರಯೋಜನವಿಲ್ಲ’…!
ಹೀಗೆ ಎಷ್ಟೋ ನೆಪಗಳನ್ನು ಹೇಳ್ಕೊಂಡು, ನಮ್ಮತ್ರ ಆ ಕೆಲಸ ಮಾಡೋಕೆ ಆಗಲ್ಲ ಅಂತ ನಾವೇ ದೃಢ ನಿರ್ಧಾರ ಮಾಡಿ ಪ್ರಯತ್ನ ಮಾಡ್ದೇ ಸೋಲ್ತೀವಿ..! ಪರೀಕ್ಷೆ ಬರೆಯದೇ ಪಾಸ್ ಆಗಬೇಕು ಅಂದ್ರೆ ಹೇಗಿರುತ್ತೆ..? ಹಂಗಿರುತ್ತೆ ಪ್ರಯತ್ನ ಪಡದೇ ಸೋಲೋದು..!
ಇರೋದ್ ಒಂದೇ ಒಂದು ಲೈಫ್..! ಈ ಲೈಫಲ್ಲಿ ಏನ್ ಮಾಡ್ಬೇಕು ಅಂತ ಅನ್ಕೊಂಡಿದ್ದೀವೋ ಅದನ್ನೆಲ್ಲಾ ಆದಷ್ಟು ಬೇಗ ಮಾಡ್ಬೇಕು..! ನಾಳೆಗೆ ಮುಂದೂಡ್ತಾ ಹೋದ್ರೆ ಆಗಲ್ಲ..! ತುಂಬಾ ನಾಳೆಗಳೇನೋ ಬರ್ತಾವೆ..! ಆದ್ರೆ, ಆ ನಾಳೆಗಳಲ್ಲಿ ನಾವುಗಳು ಬದುಕಿರಬೇಕಲ್ಲಾ.? ಲೈಫ್ ಅನ್ನೋದು ನೀರಿನ ಮೇಲಿನ ಗುಳ್ಳೆತರ..! ಅದಕ್ಕಾಗಿ ಯಾವುದನ್ನು ನಾಳೆಗೆ ಅಂತ ಮಾತ್ರ ಮುಂದಾಕೋಕೆ ಹೋಗ್ಲೇಬೇಡಿ..!
ಮನಸ್ಸು ಮಾಡಿದ್ರೆ ಯಾವುದೂ ಅಸಾಧ್ಯವಲ್ಲ..! ಪ್ರಯತ್ನ ಮಾಡ್ಬೇಕು..! ಅದ್ ಬಿಟ್ಟು ನನ್ನತ್ರ ಆಗಲ್ಲ ಅಂತ ಡಿಸೈಡ್ ಮಾಡಿ ಹಿಂದೆಸರಿದು ಬಿಟ್ರೆ ಯಾವ ಕೆಲಸತಾನೆ ಆಗುತ್ತೆ? ಹಾಗಾಗಿ ಯಾರೂ ಕೂಡ ಯಾವುದನ್ನೂ ನಿಮ್ಮಿಂದ ಆಗಲ್ಲ ಅಂತ ಸುಮ್ನೆ ಕೂತ್ಕೋಬೇಡಿ..! ಖಂಡಿತಾ ನಿಮ್ಮಿಂದ ಆಗೇ ಆಗುತ್ತೆ..! ಪ್ರಯತ್ನ ಮಾತ್ರ ಬಿಡಬೇಡಿ..!
ಇನ್ನು ಕೆಲವರು ಇರ್ತಾರೆ, ಯಾವ್ ಕೆಲಸ ಮಾಡಿದ್ರೂ ಅಷ್ಟೇ..! ಏನ್ ಪ್ರಯೋಜನ ಗುರು…! ನಮಗೆ ಅದೃಷ್ಟವಿಲ್ಲ..! ಅದಕ್ಕೆಲ್ಲಾ ಪಡ್ಕೊಂಡು ಬಂದಿರಬೇಕು..! ನನ್ನ ಹಣೇಲಿ ಬ್ರಹ್ಮ ಅದನ್ನೆಲ್ಲಾ ಬರೆದಿದ್ರೆ ನಾನೇಕೆ ಹೀಗಿರ್ತಿದ್ದೆ? ಅಂತ ಜೀವನದಲ್ಲಿ ಸಿಕ್ಕಾಪಟ್ಟೆ ಪ್ರಯತ್ನ ಪಟ್ಟು, ಕಷ್ಟಗಳನ್ನು ಎದುರಿಸಿ, ಸೋತವರಂತೆ ಕಥೆ ಹೊಡೀತಾರೆ..! ಆದರೆ, ಅವರಿಗೆ ಇನ್ನು 30 ವರ್ಷನೂ ಆಗಿರಲ್ಲ..!
ನೋಡಿ, ಅದೃಷ್ಟದಿಂದಲೇ ಎಲ್ಲವೂ ಸಿಗಲ್ಲ..! ಪರಿಶ್ರಮ ಬೇಕು..! ಬ್ರಹ್ಮ ಯಾರ್ ಹಣೇಲಿ ಏನನ್ನೂ ಬರೀಲಿಲ್ಲ..! ಈಗಲೇ ಕನ್ನಡೀಲಿ ನಿಮ್ ಮುಖ ನೋಡ್ಕೊಳ್ಳಿ..! ಹಣೆ ಖಾಲಿ ಇದೆ ಅಲ್ವಾ..? ಅಲ್ಲಿ ಏನ್ ಬೇಕಾದ್ರೂ ಬರೆದುಕೊಳ್ಳಬಹುದು..! ಅದು ನಮಗೆ ಬಿಟ್ಟಿದ್ದು..! ಆದ್ದರಿಂದ ಶ್ರಮಪಡದೇ, ಕಷ್ಟಪಟ್ಟು ಕೆಲಸ ಮಾಡದೇ, ಅಂದುಕೊಂಡಿದ್ದನ್ನು ಸಾಧಿಸಲು ಪ್ರಯತ್ನ ಪಡದೇ ಕಥೆ ಹೊಡ್ಕೊಂಡು ಇರಬೇಡಿ..!
ನಾನು ಹೆಚ್ಚಿಗೆ ಓದಿಲ್ಲ..! ನನ್ನತ್ರ ದುಡ್ಡಿಲ್ಲ ಅಂತ ನೆಪ ಹೇಳೋದು ಕೂಡ ಸರಿಯಲ್ಲ..! ಶಿಕ್ಷಣ ಬೇಕು ನಿಜ..! ಆದ್ರೆ, ಶಿಕ್ಷಣವೇ ಎಲ್ಲಾ ಅಲ್ಲ..! ಶಾಲೆಗೆ ಹೋಗಿ ಶಿಕ್ಷಣ ಪಡೆಯದೇ ಇರುವ ಎಷ್ಟೋ ಮಂದಿ ಸಾಧಕರು ನಮ್ಮ ನಡುವೆ ಇದ್ದಾರೆ..! ಹೆಚ್ಚಿನ ವಿದ್ಯಾಭ್ಯಾಸ ಪಡೆಯದೇ ಇದ್ರೂ ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರೋ ಎಷ್ಟೋ ಮಂದಿಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕದಲ್ಲಿ ಓದ್ತಿದ್ದಾರೆ..!
ಅದೇರೀತಿ ದುಡ್ಡು ಇಲ್ದೇ ಸಾಧನೆ ಮಾಡಿದವರೂ ನಮ್ಮೊಡನೆ ಇದ್ದಾರೆ..! ಅತ್ಯಂತ ಕಡುಬಡತನದಿಂದ ಬೆಳೆದು ಬಂದ ಅದೆಷ್ಟೋ ಮಂದಿ ಇವತ್ತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ..! ಇವತ್ತು ಅವರತ್ರ ದುಡ್ಡು ಕೂಡ ಇದೆ..!
ತುಂಬಾ ಕಷ್ಟಪಟ್ರೂ, ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ರೂ ಅಂದುಕೊಂಡಿದ್ದು ಕೆಲವೊಮ್ಮೆ ನೆರವೇರಲ್ಲ..! ಎಷ್ಟೋಸಲ ಸಕ್ಸಸ್ ಅನ್ನೋದು ಹತ್ತಿರ ಬಂದು ಇನ್ನೇನು ಅದನ್ನು ತಬ್ಬಿಕೊಳ್ಳಬೇಕು ಅನ್ನುವಷ್ಟರಲ್ಲಿ ದೂರಾಗಿ ಬಿಡುತ್ತೆ..! ಆ ವೇಳೆ ತುಂಬಾ ನೋವಾಗುತ್ತೆ ನಿಜ..! ಹಾಗಂತ ಬೇಜಾರ್ ಮಾಡ್ಕೊಂಡು, ಇನ್ನು ಏನೂ ಮಾಡೋದ್ ಬೇಡ ಅಂತ ತೆಪ್ಪಗೆ ಕುಳಿತುಕೊಂಡ್ರೆ ಏನ್ ಪ್ರಯೋಜನ ಹೇಳಿ? ಸುಮ್ಮನೇ ಇರೋಕ್ಕಿಂತ ಏನಾದ್ರು ಒಂದು ಪ್ರಯತ್ನ ಪಡ್ತಿದ್ರೆ ಒಳ್ಳೇದಲ್ವಾ..? ರಾತ್ರಿ-ಬೆಳಗಾಗುವುರಲ್ಲಿ ಯಶಸ್ಸು ಸಿಗೋದೇ ಬೇಡ..! ನಿಧಾನಕ್ಕೆ ಸಿಗಲಿ.. ಸಿಕ್ಕ ಯಶಸ್ಸು ಚಿರವಾಗಿ ಜೊತೆಯಲಿರಲಿ.