ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆಯೇ ಹೆಚ್ಚು ಕಾಳಜಿ. ಯಾವುದೇ ಆಹಾರ ತಿನ್ನಿಸಬೇಕಾದರೂ ಇದು ಮಕ್ಕಳ ಆರೋಗ್ಯಕ್ಕೆ ಎಷ್ಟು ಮುಖ್ಯ, ಜೊತೆಗೆ ಮಕ್ಕಳಲ್ಲಿ ಶಕ್ತಿ ಹೆಚ್ಚಿಸುವ ಆಹಾರ ಯಾವುದು ಹೀಗೆ ಪ್ರತಿಯೊಂದನ್ನು ಪರೀಕ್ಷಿಸಿಯೇ ಮಕ್ಕಳಿಗೆ ಕೊಡುತ್ತಾರೆ. ಇಂಥ ಪೋಷಕರ ಮೊದಲ ಆದ್ಯತೆ ಅಂದರೆ ಪೋಷಕಾಂಶ ಹೇರಳವಾಗಿರುವ ಡ್ರೈಫ್ರೂಟ್ಸ್.
ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ಡ್ರೈ ಡ್ರೈಫ್ರೂಟ್ಸ್ ಬೆಸ್ಟ್ ಫುಡ್ ಎಂದರೆ ತಪ್ಪಲ್ಲ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇವುಗಳ ನಿತ್ಯ ಸೇವನೆಯಿಂದ ಬುದ್ಧಿಶಕ್ತಿ ಮತ್ತು ದೇಹಶಕ್ತಿ ಎರಡೂ ಕೂಡ ವೃದ್ಧಿಯಾಗುವುದು.
ಬಾದಾಮಿ ಪ್ರತಿಯೊಬ್ಬರ ಆರೋಗ್ಯಕ್ಕೆ ಉತ್ತಮವಾದ ಆಹಾರ. ಇದನ್ನೂ ಎಲ್ಲರೂ ಸೇವಿಸುತ್ತಾರೆ. ಅದರಲ್ಲೂ
ಪ್ರತಿ ದಿನ ರಾತ್ರಿ ಎರಡು ಬಾದಾಮಿಗಳನ್ನು, ಬೆಳಗ್ಗೆ ನೀಡಿದರೆ, ಮಕ್ಕಳಿಗೆ ಬೇಕಾದ ಎನರ್ಜಿ ಸಿಗುತ್ತದೆ. ಇದರ ಜೊತೆಗೆ ಮೆದುಳು ಚುರುಕಾಗುತ್ತದೆ. ಬಾದಾಮಿ ಪುಡಿಯನ್ನು ಹಾಲಿನಲ್ಲಿ ಬೆರೆಸಿಯೂ ನೀಡಬಹುದು. ಬಾದಾಮಿ ಎಣ್ಣೆಯಿಂದ ಮಕ್ಕಳಿಗೆ ಮಸಾಜ್ ಮಾಡಿದರೆ ಸ್ನಾಯುಗಳು ಗಟ್ಟಿಯಾಗುತ್ತವೆ.
ಗೋಡಂಬಿಯಲ್ಲಿ ವಿಟಮಿನ್ ಈ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರತಿದಿನ ಗೋಡಂಬಿ ತಿನ್ನಿಸಿದರೆ ಮಕ್ಕಳ ತ್ವಚೆಯ ಹೊಳಪು ಹೆಚ್ಚುತ್ತದೆ. ಜೊತೆಗೆ ಮಗು ಸ್ಟ್ರಾಂಗ್ ಆಗುತ್ತದೆ.
ಒಣ ದ್ರಾಕ್ಷಿಯಂತೂ ಹೆಚ್ಚಿನ ಮಕ್ಕಳಿಗೆ ಇಷ್ಟ ಹಣ್ಣು. ದ್ರಾಕ್ಷಿ ಸೇವನೆಯಿಂದ ಮಕ್ಕಳ ರಕ್ತ ಸಂಚಲನ ಸುಗಮವಾಗುತ್ತದೆ. ಕಣ್ಣು ಮತ್ತು ಹಲ್ಲಿನ ಆರೋಗ್ಯಕ್ಕೂ ಒಣದ್ರಾಕ್ಷಿ ಬೆಸ್ಟ್. ಮಲಬದ್ಧತೆಗೂ ಸಹ ಒಣದ್ರಾಕ್ಷಿ ಉತ್ತಮ ಔಷಧಿ.
ಮಗು ಹೆಚ್ಚಾಗಿ ಮೂತ್ರ ಮಾಡುತ್ತಿದ್ದರೆ ಅವರಿಗೆ ವಾಲ್ನಟ್ ಜೊತೆಗೆ ಒಣದ್ರಾಕ್ಷಿ ನೀಡಿದರೆ ಒಳ್ಳೆಯದು. ವಾಲ್ನಟ್ ಮಕ್ಕಳ ಜ್ಞಾಪಕ ಶಕ್ತಿಯನ್ನೂ ವೃದ್ಧಿಸುತ್ತದೆ. ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯ ಆಹಾರ.
ಪಿಸ್ತಾದಲ್ಲೂ ವಿಟಮಿನ್ ಈ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣಕ್ಕೆ ಪಿಸ್ತಾ ಮಕ್ಕಳ ಆರೋಗ್ಯಕ್ಕೆ ಬೇಕು. ಸ್ಕಿನ್ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ ಬ್ಲಡ್ ಶುಗರ್ ಕಂಟ್ರೋಲ್ ಮಾಡಲೂ ನೆರವಾಗುತ್ತದೆ. ವಾಲ್ ನಟ್, ಪಿಸ್ತಾಗಳಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇರುವುದರಿಂದ ಮಕ್ಕಳ ಮೂಳೆ ಮತ್ತು ಹಲ್ಲಿನ ಬೆಳವಣಿಗೆಗೆ ನೆರವಾಗುತ್ತದೆ.
ಡ್ರೈಫ್ರೂಟ್ಸ್ ಗಳಲ್ಲಿ ಪೌಷ್ಟಿಕಾಂಶಗಳಿರುತ್ತವೆ. ಇಷ್ಟು ಪೋಷಕಾಂಶ ಮಕ್ಕಳಿಗೆ ಬೇಕೆ ಎಂಬುದು ಕೆಲ ಪೋಷಕರ ಪ್ರಶ್ನೆ. ಒಣಹಣ್ಣುಗಳಲ್ಲಿ ಇರುವ ನಾರಿನಾಂಶ ಮಕ್ಕಳ ದೇಹದಲ್ಲಿ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಹಾಗಾಗಿ ಇದನ್ನು ದಿನಕ್ಕೊಂದು ತಿಂದರೆ ಸಾಕು ಎನ್ನುತ್ತಾರೆ ತಜ್ಞರು.
ಡ್ರೈ ಫ್ರೂಟ್ಸ್ ಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದ್ದು ದೈಹಿಕ ಸದೃಢತೆಗೆ ಮತ್ತು ಮಕ್ಕಳ ಅಮೂಲಾಗ್ರ ಬೆಳವಣಿಗೆಗೆ ಬಹಳ ಮುಖ್ಯ. ಆದರೆ ಮಗುವಿಗೆ ಒಂದು ವರ್ಷ ತುಂಬಿದ ಬಳಿಕ ಬೇರೆ ಬೇರೆ ರೂಪದಲ್ಲಿ ಮಕ್ಕಳಿಗೆ ಡ್ರೈ ಫ್ರೂಟ್ಸ್ ತಿನ್ನಿಸಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಅಥವಾ ಅಲರ್ಜಿ ಉಂಟಾಗುವುದಿಲ್ಲ. ಇವುಗಳನ್ನು ಪುಡಿ ಮಾಡಿ ಹಾಲಿನಲ್ಲಿ ಕುಡಿಯಬಹುದು. ಇಲ್ಲವಾದಲ್ಲಿ ಒಣಹಣ್ಣುಗಳನ್ನು ನೀರಿನಲ್ಲಿ ನೆನಸಿ, ಬೆಳಗ್ಗೆ ರುಬ್ಬಿ ಹಾಲಿನ ಜೊತೆಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಈ ಹಾಲಿಗೆ ಸಕ್ಕರೆಗಿಂತ ರಾಸಾಯನಿಕ ಬಳಸದ ಕಲ್ಲು ಸಕ್ಕರೆ ಸೇರಿಸಿ.