ಉಸಿರಾಟದ ಸಮಸ್ಯೆಯಿಂದಾಗಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಾಗಿದ್ದ ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ..ಅವರು ಇಹಲೋಕವನ್ನು ತ್ಯಜಿಸಿದ್ದಾರೆ.
ಏಮ್ಸ್‌ನ ಹೃದ್ರೋಗ ವಿಭಾಗದಲ್ಲಿ ಜೇಟ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ , ಚಿಕಿತ್ಸೆ ಫಲಿಸಲಿಲ್ಲ.
ಜೇಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಲೇ ಏಮ್ಸ್ಗೆ ಧಾವಿಸಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಆರೋಗ್ಯ ವಿಚಾರಿಸಿದ್ದರು.
ಒಂದು ವರ್ಷದ ಹಿಂದೆ ಜೇಟ್ಲಿ ಬದಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಆರಂಭದಲ್ಲಿ ನಿಯಮಿತ ತಪಾಸಣೆಗಾಗಿ ಅಮೆರಿಕಕ್ಕೆ ಆಗಾಗ ತೆರಳಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ 2019ರ ಲೋಕಸಭಾ ಚುನಾವಣೆಯಿಂದ ಜೇಟ್ಲಿ ಹೊರಗುಳಿದಿದ್ದರು. ಅಲ್ಲದೆ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತಮ್ಮನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಬಿಡುಗಡೆ ಮಾಡುವಂತೆಯೂ ಮನವಿ ಸಲ್ಲಿಸಿದ್ದರು.
ಕೇಂದ್ರದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕೆಲವೇ ದಿನಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಅರುಣ್ ಜೇಟ್ಲಿ ಅಗಲಿದ್ದಾರೆ. ಬಿಜೆಪಿ ಹಾಗೂ ರಾಷ್ಟ್ರ ರಾಜಕಾರಣ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಇಬ್ಬರು ಮುತ್ಸದ್ಧಿ ನಾಯಕರನ್ನು ಕಳೆದುಕೊಂಡು ಬಡವಾಗಿದೆ.
ಈ ಇಬ್ಬರೂ ನಾಯಕರು ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದು ಮತ್ತೊಂದು ಕಾಕತಾಳಿಯ.
ಅರುಣ್ ಜೇಟ್ಲಿ ಜನಿಸಿದ್ದು 1952ರ ಡಿಸೆಂಬರ್ 28ರಂದು . ನವದೆಹಲಿಯಲ್ಲಿ ಇವರ ಜನನವಾಗಿದ್ದು.
ತಂದೆ ಮಹಾರಾಜಾ ಜೇಟ್ಲಿ ಹಾಗೂ ತಾಯಿ ರತನ್ ಪ್ರಭಾ ಜೇಟ್ಲಿ . ತಂದೆ ವಕೀಲರಾಗಿದ್ದರು. 1969-70ರ ಅವಧಿಯಲ್ಲಿ ನವದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. 1973ರಲ್ಲಿ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ವಾಣಿಜ್ಯ ಪದವಿ ಪೂರೈಸಿದ್ದರು. 1977 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿ ಪಡೆದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ವಿತ್ತ ಸಚಿವ ಗಿರಿಧರಿ ಲಾಲ್ ಡೋಗ್ರಾ ಅವರ ಪುತ್ರಿ ಸಂಗೀತಾ ಜತೆ ಅರುಣ್ ಜೇಟ್ಲಿ 1982ರಲ್ಲಿ ಸಪ್ತಪದಿ ತುಳಿದಿದ್ದರು. ರೋಹನ್ ಮತ್ತು ಸೊನಾಲಿ ಎಂಬ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಇವರಿಬ್ಬರೂ ವಕೀಲರಾಗಿದ್ದಾರೆ.
70ರ ದಶಕದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ (ಎಬಿವಿಪಿ) ನಾಯಕನಾಗಿದ್ದರು ಹಾಗೂ 1974ರಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.
1975-77ರ ವೇಳೆಯಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಿದ್ದಾಗ ಇವರು 19 ತಿಂಗಳು ಸೆರೆವಾಸ ಶಿಕ್ಷೆಗೆ ಗುರಿಯಾಗಿದ್ದರು. ರಾಜ್ನಾರಾಯಣ್ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಭ್ರಷ್ಟಾಚಾರಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅರುಣ್ ಜೇಟ್ಲಿ, ಜೆಪಿ ಅವರ ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳ ರಾಷ್ಟ್ರೀಯ ಸಮಿತಿಯ ರಾಷ್ಟ್ರೀಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜನಸಂಘಕ್ಕೆ ಸೇರ್ಪಡೆಗೊಂಡಿದ್ದರು.
1991ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡಿದ್ದ ಜೇಟ್ಲಿ, 1999ರಲ್ಲಿ ಪಕ್ಷದ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಎನ್ಡಿಎ ಸರ್ಕಾರದಲ್ಲಿ ಮೊದಲಿಗೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವರಾಗಿ, ನಂತರ ಬಂಡವಾಳ ಹಿಂತೆಗೆತ (ಸ್ವತಂತ್ರ) ಸಚಿವರಾಗಿ, 2000ದಲ್ಲಿ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆಸಲ್ಲಿಸಿದ್ದರು.. ರಾಮ್ ಜೇಠ್ಮಲಾನಿ ರಾಜೀನಾಮೆ ನೀಡಿದಾಗ ಕಾನೂನು, ನ್ಯಾಯಾಂಗ ಮತ್ತು ಕಂಪನಿ ವ್ಯವಹಾರಗಳ ಸಂಪುಟ ದರ್ಜೆಯ ಸಚಿವರಾದವರು ಇದೇ ಜೇಟ್ಲಿ.
2009ರಲ್ಲಿ ರಾಜ್ಯಸಭೆಯಲ್ಲಿನ ಪ್ರತಿಪಕ್ಷ ನಾಯಕ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾಧಿಕಾರದಲ್ಲಿ ಹಣಕಾಸು ಸಚಿವರಾಗಿ, ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಮತ್ತು ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.







