ಮೂಲಸೌಕರ್ಯ ಸರಿಪಡಿಸುವಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಫಲ: ಹೆಚ್ ಡಿ ಕುಮಾರಸ್ವಾಮಿ!
ಬೆಂಗಳೂರು:- ಮೂಲಸೌಕರ್ಯ ಸರಿಪಡಿಸುವಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಫಲವಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದ ರಾಜಧಾನಿ ಈಗ ‘ಗ್ರೇಟರ್ ಬೆಂಗಳೂರು’ ಅಲ್ಲ, ಲೂಟಿಕೋರರ ಬೆಂಗಳೂರು. ಶನಿವಾರ ಹಾಗೂ ಭಾನುವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಜಲಾವೃತಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೂಲಸೌಕರ್ಯಗಳನ್ನು ಸರಿಪಡಿಸುವಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ. ಗುಂಡಿಗಳು, ತೆರೆದ ಚರಂಡಿಗಳು ಮತ್ತು ಪದೇ ಪದೇ ಪ್ರವಾಹ ಉಂಟಾಗುವುದು ದುರಾಡಳಿತದ ಪುರಾವೆಯಾಗಿದೆ. ಮಳೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಾಗದೇ ಇರುವುದರ ಸೂಚಕವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಾರ್ವಜನಿಕರ ಹಣವನ್ನು ವ್ಯಯಿಸುವಲ್ಲಿನ ಹೊಣೆಗಾರಿಕೆ, ಬದ್ಧತೆಯನ್ನೂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಸ್ತೆ ಗುಂಡಿಯನ್ನು ಮುಚ್ಚಲು ಮಣ್ಣು ಕೂಡ ಇಲ್ಲ, ಆದರೆ ಸುರಂಗ ರಸ್ತೆಗಳಿಗೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಟೆಂಡರ್‌ಗಳನ್ನು ಕರೆಯಲಾಗುತ್ತದೆ ಎಂದು ವ್ಯಂಗ್ಯವಾಡಿದ ಅವರು, ಜನರು ಪ್ರತಿಭಟಿಸದ ನಿರ್ಜೀವ ಕಲ್ಲುಗಳು ಎಂದು ಕಾಂಗ್ರೆಸ್ ಸರ್ಕಾರ ಭಾವಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.