ಮೇಕೆದಾಟು: ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ – ಹೆಚ್.ಡಿ. ಕುಮಾರಸ್ವಾಮಿ ಕಿಡಿ
ಬೆಂಗಳೂರು: ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುತ್ತಾ ನಮ್ಮ ತೆರಿಗೆ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ತಮಿಳುನಾಡಿಗೆ ನೀರು ಹರಿಸುತ್ತಾ ನಾವು *ನೀರಗಂಟಿ* ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅತೀವ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ *ಕಾವೇರಿ ನದಿ ನೀರಿನ ಹಂಚಿಕೆ ಕುರಿತ ಕಾರ್ಯಗಾರ, ವಿಚಾರ ಸಂಕಿರಣ* ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯ ಆಗಿದೆ. ರಾಜ್ಯ ಬಹಳಷ್ಟು ಹಿಂದಕ್ಕೆ ಹೀಗಿದೆ. ಯಾವಾಗಲೂ ನಮ್ಮ ರಾಜ್ಯಕಿಂತ ನೆರೆ ರಾಜ್ಯಕ್ಕೆ ಅನುಕೂಲ ಆಗುತ್ತಿದೆ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ. ನೀರಿನ ವಿಷಯದಲ್ಲಿಯೂ ಅದೇ ಆಗುತ್ತಿದೆ ಎಂದ ಅವರು; ಅವರು ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ತಮಿಳುನಾಡಿನ ಡಿಎಂಕೆ ಜತೆ ನಮ್ಮ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತ. ಡಿಎಂಕೆ ಜತೆ ಮೇಕೆದಾಟು ವಿಷಯ ಮಾತನಾಡುವುದಕ್ಕೆ ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇಲ್ಲಿ ನೋಡಿದರೆ ಮೇಕೆದಾಟು ಪಾದಯಾತ್ರೆ ಮಾಡಿ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.