ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಬಯೋಪಿಕ್‌ನ ಫಸ್ಟ್‌ ಲುಕ್ ರಿಲೀಸ್!

admin
By admin
2 Min Read

2008ರ ನವೆಂಬರ್‌ 26ರಂದು ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ ಉಗ್ರರು ದಾಳಿ, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ಈ ದುಷ್ಕೃತ್ಯಕ್ಕೆ ಅನೇಕರು ಬಲಿಯಾದರು. ಅದರಲ್ಲಿ ಪೊಲೀಸರು, ಸೈನಿಕರು ಕೂಡ ಇದ್ದರು. ಹಾಗೇ ಸಾವನ್ನಪ್ಪಿದವರಲ್ಲಿ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಕೂಡ ಒಬ್ಬರು. ಇದೀಗ ಅವರ ಜೀವನದ ಕೆಲವು ಅಂಶಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಟ ಮಹೇಶ್‌ ಬಾಬು ‘ಮೇಜರ್’ ಸಿನಿಮಾ ನಿರ್ಮಿಸಿದ್ದಾರೆ. ಅದರಲ್ಲಿ ಹೀರೋ ಆಗಿ ‘ಕ್ಷಣಂ’, ‘ಗೂಡಚಾರಿ’, ‘ಎವರು’ ಖ್ಯಾತಿಯ ಅಡಿವಿ ಶೇಷ್‌ ನಟಿಸಿದ್ದಾರೆ. ಇಂದು (ಡಿ.17) ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ‘ಮೇಜರ್’ ಸಿನಿಮಾದ ಫಸ್ಟ್‌ ಲುಕ್ ರಿಲೀಸ್ ಮಾಡಲಾಗಿದೆ.
ಕೈಯಲ್ಲಿ ಗನ್‌ ಹಿಡಿದು, ಕಮಾಂಡೋ ಗೆಟಪ್‌ನಲ್ಲಿ ನಟ ಅಡಿವಿ ಶೇಷ್‌ ‌ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ಶಶಿಕಿರಣ್ ತಿಕ್ಕಾ ಇದರ ನಿರ್ದೇಶನ ಮಾಡಿದ್ದಾರೆ. ಇನ್ನು, ನಿರ್ಮಾಪಕ ಮಹೇಶ್‌ ಬಾಬು, ಈ ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿಕೊಂಡು, ಅಡಿವಿ ಶೇಷ್‌‌ಗೆ ಜನ್ಮದಿನ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು, ಈ ಸಿನಿಮಾಗೆ ಮಹೇಶ್‌ ಜೊತೆ ಸೋನಿ ಪಿಕ್ಚರ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಹಣ ಹಾಕಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧಗೊಳ್ಳಲಿರುವ ಈ ಸಿನಿಮಾದ ಶೇ.50ರಷ್ಟು ಚಿತ್ರೀಕರಣ ಲಾಕ್‌ಡೌನ್‌ಗಿಂತ ಮೊದಲೇ ಕಂಪ್ಲೀಟ್ ಆಗಿತ್ತು.
ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರವನ್ನು ಮಾಡುವುದಕ್ಕಾಗಿ ಅಡಿವಿ ಶೇಷ್‌ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಸಂದೀಪ್ ಅವರ ಪೋಷಕರನ್ನು ಭೇಟಿ ಮಾಡಿದ್ದರಂತೆ ಅವರು. ಸಂದೀಪ್‌ ಅವರ ಬದುಕಿನ ಮತ್ತೊಂದು ಆಯಾಮವನ್ನು ಈ ಸಿನಿಮಾ ಮೂಲಕ ತೋರಿಸುವುದಾಗಿ ತಂಡ ಹೇಳಿಕೊಂಡಿದೆ. ಶೋಭಿತಾ ಧುಲಿಪಲಾ, ಸಾಯಿ ಮಂಜ್ರೇಕರ್ ಕೂಡ ‘ಮೇಜರ್‌’ನಲ್ಲಿ ಬಣ್ಣ ಹಚ್ಚಿದ್ದಾರೆ.
ಈ ಬಗ್ಗೆ ಅಡಿವಿ ಶೇಷ್ ಹಿಂದೊಮ್ಮೆ ಹೀಗೆ ಹೇಳಿಕೊಂಡಿದ್ದರು. ‘2008ರ ನವೆಂಬರ್‌ 27ರಂದು ಮೊದಲ ಬಾರಿಗೆ ಅವರ ಫೋಟೋ ಟಿವಿ ಚಾನಲ್‌ಗಳಲ್ಲಿ ಬಿತ್ತರವಾದಾಗ ನಾನು ಸ್ಯಾನ್‌ ಫ್ರಾನ್ಸಿಸ್ಕೋನಲ್ಲಿದ್ದೆ. ಅವರನ್ನು ನೋಡಿದಾಗ ನಮ್ಮ ಕುಟುಂಬದ ಒಬ್ಬ ಸದಸ್ಯರೇನೋ ಎನಿಸಿತು. ಆ ಪಾಸ್‌ಪೋರ್ಟ್‌ ಸೈಜ್‌ ಫೋಟೋದಲ್ಲಿ ಅವರ ಕಣ್ಣುಗಳನ್ನು ಗಮನಿಸಿದರೆ ಅವರಲ್ಲಿ ಒಂದು ಮ್ಯಾಡ್‌ನೆಸ್‌, ಪ್ಯಾಷನ್‌ ಮತ್ತು ಸ್ಪಿರಿಟ್‌ ಕಾಣಿಸಿತು. ಆಗಲೇ ನನಗೆ ಅವರ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿತು’ ಎಂದು ಮಾಹಿತಿ ನೀಡಿದ್ದರು ಅಡಿವಿ ಶೇಷ್.

Share This Article