ಗೆಜ್ಜಲಗೆರೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಮುಖ್ಯಮಂತ್ರಿ, ನಿಖಿಲ್ ಸೋಲಿಸಬೇಕು ಮತ್ತು ಸರ್ಕಾರ ತೆಗೆಯಬೇಕೆಂದು ಎಲ್ಲ ಪಕ್ಷಗಳೂ ಒಗ್ಗೂಡಿವೆ. ತಮಗೆ ಕುತಂತ್ರ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ನಾವು ಯಾರನ್ನೂ ಹೆದರಿಸಿ ಚುನಾವಣೆ ಮಾಡುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಟೀಕಾಪ್ರಹಾರ ಮಾಡಿದರು.
ಚುನಾವಣೆಯಲ್ಲಿ ಅನುಕಂಪ ಪಡೆಯಲು ಅವರವರೇ ಕಲ್ಲು ಹೊಡೆದುಕೊಂಡು ಆಸ್ಪತ್ರೆಗೆ ದಾಖಲಾಗಿ ನಮ್ಮ ವಿರುದ್ಧವೇ ಕುತಂತ್ರ ನಡೆಸಲು ಮುಂದಾಗಿದ್ದಾರೆ.
ಅವರ ಬಳಿ ಇದ್ದ ಅಸ್ತ್ರಗಳೆಲ್ಲ ಮುಗಿದುಹೋಗಿವೆ. ಹೀಗಾಗಿ ಇಂತಹ ಕುತಂತ್ರ ಮಾಡುತ್ತಿದ್ದು, ಮತದಾರರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಎಲ್ಲ ಪಕ್ಷಗಳೂ ಒಟ್ಟಾಗಿ ನಮ್ಮ ವಿರುದ್ಧ ಕೆಲಸ ಮಾಡುತ್ತಿವೆ. ಎದುರಾಳಿಯ ಮನೆಯಲ್ಲಿ ಕೆಲಸ ಮಾಡುವವರಿಗೆ ನಾವು ಆಮಿಷವೊಡ್ಡಿದ್ದೇವೆ ಎಂಬ ಆರೋಪ ಮಾಡಲಾಗಿದೆ. ಅಂತಹ ಆಮಿಷವೊಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಕಡೆಯವರನ್ನು ಸೆಳೆದು ಸಿಂಗಾಪುರಕ್ಕೆ ಕಳುಹಿಸುತ್ತಾರೆ ಎಂಬ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ಅಂತಹ ಕೀಳುಮಟ್ಟದ ರಾಜಕೀಯವನ್ನು ಇದುವರೆಗೆ ಮಾಡಿಲ್ಲ ಎಂದು ಪಕ್ಷೇತರ ಅಭ್ಯರ್ಥಿ (ಸುಮಲತಾ)ಗೆ ತಿರುಗೇಟು ನೀಡಿದರು.